ಸೂಕ್ತ ಸ್ಥಳಾವಕಾಶ ಇರುವ ಮನೆಯ ಯಾವುದೇ ತೆರೆದ ಜಾಗದಲ್ಲಿ ತರಕಾರಿ, ಹೂಗಳನ್ನು ಬೆಳಸಬಹುದು. ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳನ್ನು ತಿನ್ನುವುದಷ್ಟೇ ಅಲ್ಲದೆ ಹಣ ಸಹ ಉಳಿಸಬಹುದು.
ಮಡಕೆ ಅಥವಾ ಪಾಟ್ ಇರಿಸಿಕೊಳ್ಳಲು ಮನೆಯಲ್ಲಿ ಯಾವುದೇ ಜಾಗವಿರದಿದ್ದಲ್ಲಿ, ಬಾಲ್ಕನಿಯಲ್ಲಿ ಬಿಸಿಲು ಚೆನ್ನಾಗಿ ಬರುವಂತಹ ಸ್ಥಳವನ್ನು ಕೈತೋಟಕ್ಕೆ ಆಯ್ಕೆ ಮಾಡಿಕೊಳ್ಳಿ.
ನಿಮ್ಮ ಮನೆ ನೆಲ ಅಂತಸ್ತಿನಲ್ಲಿದ್ದು, ಮಣ್ಣು ತೇವಾಂಶದಿಂದ ಕೂಡಿದ್ದರೆ ಅಲ್ಲಿಯೇ ಸುಂದರ ಕೈತೋಟವನ್ನು ಮಾಡಿ.
ಟೆರೇಸ್ ನಲ್ಲಿ ಚಿಕ್ಕದಾದ ತೋಟವನ್ನು ನಿರ್ಮಿಸಬೇಕಾದರೆ ಮೊದಲು ಪಾಲಿಥಿನ್ ಹಾಕಿ. ಅದರಲ್ಲಿ ಚಿಕ್ಕ ರಂಧ್ರಗಳನ್ನು ಮಾಡಿ, ಇದರಿಂದ ಮಳೆಗಾಲದಲ್ಲಿ ಹೆಚ್ಚಾದ ನೀರು ಹೊರಹೋಗುತ್ತದೆ.
ಯಾವಾಗಲೂ ಪಾಟ್ ಗಳು ಮಣ್ಣಿನದ್ದೇ ಆಗಿರಲಿ. ಏಕೆಂದರೆ ಸಸ್ಯಗಳು ಪ್ಲಾಸ್ಟಿಕ್ ಗಿಂತ ಮಣ್ಣಿನ ಮಡಿಕೆಯಲ್ಲಿ ಹೆಚ್ಚು ಬೆಳವಣಿಗೆ ಹೊಂದುತ್ತವೆ.
ಗಿಡ ನೆಡುವಾಗ ಮಣ್ಣಿಗೆ ಬೇವಿನ ಎಲೆಗಳನ್ನು ಸೇರಿಸಿ ಹಾಕಿದಾಗ, ಕೀಟಗಳ ತೊಂದರೆ ತಪ್ಪಿಸಬಹುದು.
ಸಾಧ್ಯವಾದಷ್ಟು ನೀರು ಹಾಕಿ, ಗಿಡದ ಪೌಷ್ಠಿಕಾಂಶಕ್ಕೆ ಮನೆಯ ಹಸಿ ತ್ಯಾಜ್ಯಗಳು ಉತ್ತಮ. ಬೆಳಗ್ಗೆ ಅಥವಾ ಸಂಜೆ ಸಸ್ಯಗಳಿಗೆ ನೀರು ಹಾಕಿ.
ಸಸ್ಯಗಳಿಗೆ ಸರಿಯಾದ ಸೂರ್ಯನ ಬೆಳಕು ಅಗತ್ಯ. ಇಲ್ಲವಾದರೆ ಸಸ್ಯಗಳು ಸತ್ತು ಹೋಗುತ್ತವೆ. ದಿನಕ್ಕೆ 3-4 ಗಂಟೆಗಳ ಸೂರ್ಯನ ಬೆಳಕು ಸಾಕು. ಬೇಸಿಗೆಯಲ್ಲಿ ಉರಿಬಿಸಿಲಿನಿಂದ ಸಸ್ಯಗಳನ್ನು ಉಳಿಸಿ. ಬಿಸಿಲಿನಲ್ಲಿ ಎಂದೂ ಗಿಡಕ್ಕೆ ನೀರು ಹಾಕಬೇಡಿ.