alex Certify ಕಾವೇರಿ ನೀರು ಹಂಚಿಕೆಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಹೆಚ್.ಡಿ.ದೇವೇಗೌಡರು ಪತ್ರ : ಸಿಎಂ ಸಿದ್ದರಾಮಯ್ಯ ಸ್ವಾಗತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾವೇರಿ ನೀರು ಹಂಚಿಕೆಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಹೆಚ್.ಡಿ.ದೇವೇಗೌಡರು ಪತ್ರ : ಸಿಎಂ ಸಿದ್ದರಾಮಯ್ಯ ಸ್ವಾಗತ

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಸ್ತುತ ಸಂದರ್ಭದಲ್ಲಿ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದೊಂದೇ ಪರಿಣಾಮಕಾರಿ ಮತ್ತು ಈ ಸಂದರ್ಭಕ್ಕನುಗುಣವಾದ ಪರಿಹಾರವಾಗಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿಗಳಾದ ದೇವೇಗೌಡರ ಮನವಿಯನ್ನು ಪುರಸ್ಕರಿಸಿ, ಕೂಡಲೇ ಮಾತುಕತೆಗೆ ಆಹ್ವಾನಿಸುತ್ತಾರೆಂದು ನಂಬಿದ್ದೇನೆ. ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಹೆಚ್.ಡಿ.ದೇವೇಗೌಡರ ಈ ನಿರ್ಧಾರದಿಂದಾದರೂ ಪ್ರೇರಣೆ ಪಡೆದು ರಾಜ್ಯ ಬಿಜೆಪಿ ನಾಯಕರು ಮತ್ತು ಆ ಪಕ್ಷದ ಸಂಸದರು ಸೇರಿ ಪ್ರಧಾನಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಡ ಹೇರಬೇಕು. ಅತೀ ಶೀಘ್ರದಲ್ಲಿ ರಾಜ್ಯದ ಸರ್ವಪಕ್ಷಗಳ ನಾಯಕರ ನಿಯೋಗವನ್ನು ಪ್ರಧಾನ ಮಂತ್ರಿ ಭೇಟಿಮಾಡುವಂತೆ ಮಾಡಬೇಕು ಎಂದು ಅವರಲ್ಲಿ ಮನವಿ ಮಾಡುತ್ತೇನೆ.

ನೆಲ-ಜಲ-ಭಾಷೆಯ ಹಿತಾಸಕ್ತಿಯ ರಕ್ಷಣೆಯ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಭಿನ್ನಮತಗಳನ್ನು ಮರೆತು ಒಟ್ಟಾಗಿ ಸಮಸ್ಯೆಯ ಪರಿಹಾರಕ್ಕಾಗಿ ಪ್ರಯತ್ನ ಪಟ್ಟಿರುವ ಇತಿಹಾಸ ಕರ್ನಾಟಕ ರಾಜ್ಯಕ್ಕೆ ಇದೆ. ಈ ಪರಂಪರೆಯನ್ನು ಜೆಡಿಎಸ್ ಪಕ್ಷದಂತೆ ಬಿಜೆಪಿ ಕೂಡಾ ಪಾಲಿಸಿಕೊಂಡು ಬರುತ್ತದೆ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...