ಹುಲಿಯ ದಾಳಿಗೆ ಗುರಿಯಾಗಿದ್ದರೂ ಧೈರ್ಯವಾಗಿ ವ್ಯಾಘ್ರನನ್ನು ಎದುರಿಸಿ ಬದುಕಿ ಬಂದ ಮಹಿಳೆಯೊಬ್ಬರಿಗೆ ಪರಿಹಾರವಾಗಿ 10,000 ರೂ.ಗಳನ್ನು ನೀಡಿದ ಕುರಿತಾಗಿ ಬಾಂಬೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.
ಹುಲಿಯಂಥ ವನ್ಯಮೃಗದ ವಿರುದ್ಧ ಹೋರಾಡಿ ಬಂದಿರುವ ಆಕೆಗೆ ಕಡೆ ಪಕ್ಷ ಒಂದು ಲಕ್ಷ ರೂಪಾಯಿಯಾದರೂ ಪರಿಹಾರ ಧನ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
“ಅರ್ಜಿದಾರರು ಸಂಪೂರ್ಣ ವಯಸ್ಕ ಹುಲಿಯ ದಾಳಿಗೊಳಗಾಗಿ ಅನುಭವಿಸಿರುವ ಯಾತನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಎದುರುದಾರು ಇದನ್ನೊಂದು ಸಣ್ಣ ಗಾಯವೆಂದು ಪರಿಗಣಿಸಿ ಆಕೆಗೆ ಕೇವಲ 10,000 ರೂ. ಪರಿಹಾರ ನೀಡಿದ್ದಾರೆ. ಆಕೆ ಹುಲಿಯ ದಾಳಿಯಿಂದ ಪಾರಾಗಿ ಬಂದಿದ್ದಾರೆ ಎಂಬುದು ಇಲ್ಲಿ ಮುಖ್ಯ,” ಎಂದು ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರಾದ ರೋಹಿತ್ ಬಿ ಡೆಯೋ ಹಾಗು ವೃಶಾಲಿ ವಿ ಜೋಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
“ಸರ್ಕಾರವು ಆಕೆಗೆ ಪರಾಕ್ರಮದ ಪ್ರಮಾಣ ಪತ್ರ ನೀಡಿದರೂ ಸಹ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ನಿರ್ಧಾರ ನಮಗೆ ಶಾಕ್ ನೀಡಿದೆ,” ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಜನವರಿ 24, 2017ರಂದು ಬೀಜಗಳನ್ನು ಸಂಗ್ರಹಿಸಲು ಅರಣ್ಯದೊಳಗೆ ತೆರಳಿದ್ದ ಚಂದ್ರಾಪುರದ ಮಹಿಳಾ ನೌಕರರೊಬ್ಬರು ತಮ್ಮ ಮೇಲೆ ಹುಲಿ ದಾಳಿ ಮಾಡಿದಾಗ ಧೈರ್ಯದಿಂದ ಅದನ್ನು ಎದುರಿಸಿದ್ದಾರೆ. ಅಲ್ಲಿಯೇ ಇದ್ದ ಇನ್ನಷ್ಟು ನೌಕರರು ಆಕೆಯನ್ನು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ನಾಲ್ಕು ದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿದ್ದ ಆಕೆಗೆ ನೀಡಿದ ಪರಿಹಾರ ಏನೇನೂ ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ರಾಜ್ಯದ ಕಂದಾಯ ಹಾಗೂ ಅರಣ್ಯ ಇಲಾಖೆ ಮತ್ತು ಅರಣ್ಯಾಧಿಕಾರಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತೆ ತಮಗೆ ದೊರಕಿದ ಪರಿಹಾರದ ಮೊತ್ತ ತೀರಾ ಕಡಿಮೆಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು.