
ಶಿಮ್ಲಾದ ಮಾಲ್ ರಸ್ತೆಯಲ್ಲಿರುವ ಐಕಾನಿಕ್ ಇಂಡಿಯನ್ ಕಾಫಿ ಹೌಸ್ ಬಹುತೇಕ ಎಲ್ಲಾ ರಾಜಕಾರಣಿಗಳು ಸೆಲೆಬ್ರಿಟಿಗಳಿಗಳ ಹಾಟ್ ಫೇವರಿಟ್ ತಾಣ.
ಕೊರೊನಾದ ಬಿಸಿ ಈ ಪ್ರಸಿದ್ಧ ಕಾಫಿ ಹೌಸ್ಗೂ ತಟ್ಟಿದ್ದು ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಮೊಟ್ಟ ಮೊದಲ ಇಂಡಿಯನ್ ಕಾಫಿ ಹೌಸ್ನ ಶಾಖೆ ಆರಂಭವಾಗಿದ್ದು ದೆಹಲಿಯಲ್ಲಿ. 1957ರ ಅಕ್ಟೋಬರ್ 27ರಂದು ಮೊದಲ ಶಾಖೆ ಆರಂಭವಾಗಿತ್ತು. ಇದಾಗಿ ಐದು ವರ್ಷಗಳ ಬಳಿಕ ಅಂದರೆ 1962ರಲ್ಲಿ ಶಿಮ್ಲಾದಲ್ಲಿ ಈ ಕೆಫೆ ತೆರೆದಿತ್ತು. ಶಿಮ್ಲಾದ ಈ ಪ್ರಸಿದ್ಧ ಕಾಫಿ ಕೆಫೆಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹಾಗೂ ಅಡ್ವಾಣಿಯಂತಹ ಗಣ್ಯರು ಕಾಫಿ ಸವಿದಿದ್ದಾರೆ. ಅಲ್ಲದೇ 2017ರಲ್ಲಿ ಪ್ರಧಾನಿ ಮೋದಿ ಸಹ ಈ ಐಕಾನಿಕ್ ಕೆಫೆಗೆ ಭೇಟಿ ನೀಡಿದ್ದರು. ಆದರೆ ಇದೀಗ ಈ ಕಾಫಿ ಕೆಫೆ ತೀವ್ರ ನಷ್ಟ ಅನುಭವಿಸುತ್ತಿದ್ದು ಕಳೆದ 10 ತಿಂಗಳಿನಿಂದ ಸಿಬ್ಬಂದಿಗೆ ಸಂಬಳ ನೀಡಲೂ ಆಗುತ್ತಿಲ್ಲ ಎಂದು ಕೆಫೆ ಮಾಲೀಕ ಹೇಳಿದ್ದಾರೆ.
ಇಂಡಿಯನ್ ಕಾಫಿ ಹೌಸ್ನ ಹಿರಿಯ ವ್ಯವಸ್ಥಾಪಕರಾಗಿರುವ ಆತ್ಮ ರಾಮ್ ಶರ್ಮಾ ಈ ವಿಚಾರವಾಗಿ ಮಾತನಾಡಿದ್ದು, ನಾವು ಲಾಭ ಹಾಗೂ ನಷ್ಟರಹಿತ ರೀತಿಯಲ್ಲಿ ಕೆಫೆಯನ್ನ ನಡೆಸುತ್ತಿದ್ದೇವೆ. ನಮ್ಮ ಬಳಿ ಹಣವಿಲ್ಲ. ಕಳೆದೊಂದು ವರ್ಷಗಳಿಂದ ನಾವು ಸಿಬ್ಬಂದಿಗೆ ಸಂಬಳವನ್ನೇ ನೀಡಿಲ್ಲ. ನಾವು ಶೀಘ್ರದಲ್ಲೇ ಕಾಫಿ ಹೌಸ್ ಬಂದ್ ಮಾಡಲಿದ್ದೇವೆ ಎಂದು ಹೇಳಿದ ಬಳಿಕ ಅನೇಕರು ನಮ್ಮ ಬೆಂಬಲಕ್ಕೆ ಬಂದಿದ್ದಾರೆ. ಎಂದು ಹೇಳಿದ್ರು.
ಕೊರೊನಾ ಸಂಕಷ್ಟಕ್ಕೂ ಮುನ್ನ ಶಿಮ್ಲಾದ ಈ ಕಾಫಿ ಹೌಸ್ ದಿನಕ್ಕೆ 60 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿತ್ತು. ಆದರೆ ಕೊರೊನಾದಿಂದಾಗಿ ಈಗ ದಿನಕ್ಕೆ 4 ಸಾವಿರ ರೂಪಾಯಿ ಸಂಪಾದನೆ ಸಿಕ್ಕಿದ್ರೆ ಹೆಚ್ಚು ಎಂಬಂತಾಗಿದೆ. ದಿನಕ್ಕೆ ಮೂರು ಗಂಟೆಗಳ ಕಾಲ ಮಾತ್ರ ಕೆಫೆ ತೆರೆಯಲು ಅವಕಾಶ ಇರೋದ್ರಿಂದ ಈ ಐಕಾನಿಕ್ ಕಾಫಿ ಹೌಸ್ ಭಾರೀ ನಷ್ಟವನ್ನ ಅನುಭವಿಸಿದೆ.