ದೇಹದ ಆರೋಗ್ಯ ಸಮತೋಲನದಲ್ಲಿ ಇರಬೇಕು ಅಂದರೆ ಪ್ರೋಟಿನ್ಯುಕ್ತ ಆಹಾರವನ್ನ ಸೇವಿಸೋದು ಅತ್ಯಗತ್ಯ. ಆಹಾರ ಕ್ರಮದಲ್ಲಿ ನೀವು ಪ್ರೋಟಿನ್ಯುಕ್ತ ಆಹಾರವನ್ನೇ ಸೇವಿಸೋದ್ರಿಂದ ನಿಮಗೆ ಯಾವಾಗಲೂ ಹೊಟ್ಟೆ ತುಂಬಿರುವಂತೆ ಅನುಭವವಾಗುತ್ತೆ. ಇದರಿಂದಾಗಿ ನಿಮ್ಮ ದೇಹದ ತೂಕ ಕೂಡ ಏರಿಕೆಯಾಗೋದಿಲ್ಲ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ಪ್ರೋಟಿನ್ ತುಂಬಾನೇ ಮುಖ್ಯ. ಹೀಗಾಗಿ ನೀವು ನಿಮ್ಮ ನಿತ್ಯ ಆಹಾರ ಕ್ರಮದಲ್ಲಿ ಮೊಟ್ಟೆ, ಬೇಳೆ-ಕಾಳುಗಳು ಸೇರಿಸೋದು ಒಳ್ಳೆಯದು.
ಆದರೆ ಕೇವಲ ಪ್ರೋಟಿನ್ ಅಂಶವನ್ನ ಹೊಂದಿರುವ ಆಹಾರವೊಂದನ್ನೇ ಸೇವಿಸೋದು ಸಹ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅತಿಯಾದ ಪ್ರೋಟಿನ್ಯುಕ್ತ ಆಹಾರ ಸೇವನೆ ನಿಮ್ಮ ತೂಕವನ್ನ ಹೆಚ್ಚಿಸಬಹುದು. ಪ್ರೋಟಿನ್ ಡಯಟ್ ಮಾಡುವ ಬಹುತೇಕ ಮಂದಿ ಮಾಡುವ ದೊಡ್ಡ ತಪ್ಪೇ ಇದು. ಅತಿಯಾದ ಪ್ರೋಟಿನ್ ಸೇವನೆಯಿಂದ ತೂಕ ಹೇಗೆ ಹೆಚ್ಚಳವಾಗುತ್ತೆ ಅನ್ನೋದಕ್ಕೆ ಮಾಹಿತಿ ಇಲ್ಲಿದೆ ನೋಡಿ.
ಅತಿಯಾದ ಪ್ರೋಟಿನ್ ಅಥವಾ ಅತೀ ಕಡಿಮೆ ಪ್ರಮಾಣ ಪ್ರೋಟಿನ್ ಸೇವನೆ ಆರೋಗ್ಯಕ್ಕೆ ಹಾನಿಕಾರಿ. ಇವೆರಡರಿಂದಲೂ ನಿಮ್ಮ ದೇಹದ ತೂಕ ಇಳಿಕೆಯಾಗೋದಿಲ್ಲ. ಚಿಕನ್ ಹಾಗೂ ಮಟನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪ್ರೋಟಿನ್ ಅಡಗಿದೆ. ಆದರೆ ಇದರಲ್ಲಿ ಕಾರ್ಬೋಹೈಡ್ರೇಟ್ ಕೂಡ ಅತಿಯಾದ ಪ್ರಮಾಣದಲ್ಲಿದೆ ಅನ್ನೋದನ್ನೂ ನೀವು ಮರೆಯುವ ಹಾಗಿಲ್ಲ.
ನಿಮ್ಮ ದೇಹದ ತೂಕ ಹಾಗೂ ನಿಮ್ಮ ಜೀವನ ಕ್ರಮವನ್ನ ಆಧರಿಸಿ ನೀವು ಎಷ್ಟು ಪ್ರೋಟಿನ್ ಸೇವನೆ ಮಾಡಬೇಕು ಅನ್ನೋದನ್ನ ನಿರ್ಧರಿಸಬೇಕು. ಅತಿಯಾಗಿ ಪ್ರೋಟಿನ್ ಸೇವನೆ ಮಾಡಿದ್ರೆ ನಿಮ್ಮ ದೇಹ ತೂಕ ಹೆಚ್ಚಾಗಲಿದೆ. ಇದು ಮಾತ್ರವಲ್ಲದೇ ಮಲಬದ್ಧತೆ ಸಮಸ್ಯೆ ಕೂಡ ಶುರುವಾಗಬಹುದು.
ತೂಕ ಇಳಿಸಬೇಕು ಅಂದರೆ ಪ್ರೋಟಿನ್ಯುಕ್ತ ಆಹಾರ ಸೇವನೆ ಮಾಡಬೇಕು ಅನ್ನೋದು ನಿಜ. ಆದರೆ ಹಾಗಂತ ಕಾರ್ಬೋಹೈಡ್ರೇಟ್ಯುಕ್ತ ಆಹಾರವನ್ನ ಸೇವಿಸಲೇಬಾರದು ಅನ್ನೋ ಭಾವನೆ ಕೂಡ ತಪ್ಪು. ದೇಹಕ್ಕೆ ಕಾರ್ಬೋಹೈಡ್ರೇಟ್ನಿಂದ ಎನರ್ಜಿ ಸಿಗಲಿದೆ. ಹೀಗಾಗಿ ನೀವು ಆರೋಗ್ಯಕರ ರೀತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆದರೂ ಕಾರ್ಬೋಹೈಡ್ರೇಟ್ ಸೇವಿಸಬೇಕು.
ನಿಯಮಿತ ಪ್ರಮಾಣದಲ್ಲಿ ಫೈಬರ್ ಹಾಗೂ ಕಾರ್ಬೋಹೈಡ್ರೇಟ್ ಸೇವನೆ ಮಾಡೋದ್ರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗೋದಿಲ್ಲ. ಇದರ ಜೊತೆಯಲ್ಲಿ ಬೇಕರಿ ತಿನಿಸುಗಳನ್ನ ಸಂಪೂರ್ಣವಾಗಿ ತ್ಯಜಿಸೋದನ್ನ ಮರೆಯದಿರಿ.