ಹಾಸನ: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರವಣೂರಿನಲ್ಲಿ ಏಕಾಏಕಿ ಸಂಗೊಳ್ಳಿ ರಾಯಣ್ಣ ವೃತ್ತ ತೆರವುಗೊಳಿಸಲಾಗಿದ್ದು, ಇದೀಗ ಕೆಲ ಸಂಘಟನೆಗಳು ಅದೇ ಜಾಗದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ರಾಯಣ್ಣ ವೃತ್ತ ತೆರವುಗೊಳಿಸುತ್ತಿದ್ದಂತೆ ಬಿಡದಿಯಿಂದ 8 ಅಡಿ ಎತ್ತರದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಹೊತ್ತು ತರಲಾಗಿದ್ದು, ವೃತ್ತ ತೆರವು ಮಾಡಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಖಾಸಗಿ ಜಾಗದಲ್ಲಿ ಪ್ರತಿಮೆ ನಿರ್ಮಾಣ ಮಾಡುವುದಾಗಿ ಅಭಿಮಾನಿಗಳು ಘೋಷಿಸಿದ್ದಾರೆ.
ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ಸ್ಥಳೀಯರು, ಗ್ರಾಮಸ್ಥರು ಸಾಥ್ ನೀಡಿದ್ದು, ಶ್ರವಣೂರಿನಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.