ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಮೀನಾಗಾರರ ಗುಂಪೊಂದು ಅದ್ಭುತ ಆವಿಷ್ಕಾರವನ್ನು ಮಾಡಿದೆ. ಸುಮಾರು 700 ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು ಎಂದು ಹೇಳಲಾದ ಚಿನ್ನದ ಸಂಪತ್ತಿಗೆ ಹೆಸರುವಾಸಿಯಾಗಿದ್ದ ಸಾಮ್ರಾಜ್ಯವೊಂದರ ಪತ್ತೆ ಹಚ್ಚಿದ್ದಾರೆ.
ಚಿನ್ನದ ದ್ವೀಪ ಅಂತಾನೇ ಕರೆಯಲ್ಪಡುತ್ತಿದ್ದ ಸಾಮ್ರಾಜ್ಯವು, ಸುಮಾರು 700 ವರ್ಷಗಳ ಹಿಂದೆ ಕಣ್ಮರೆಯಾಗಿದೆ ಎಂದು ನಂಬಲಾಗಿದೆ. ಕಳೆದ ಐದು ವರ್ಷಗಳಿಂದ ಮೀನುಗಾರರು ಈ ನಿಧಿಯನ್ನು ಹುಡುಕುತ್ತಿದ್ದರಂತೆ. ಅಂತಿಮವಾಗಿ ಇದನ್ನು ಸುಮಾತ್ರಾ ದ್ವೀಪದ ಪಾಲೆಂಬಾಂಗ್ ಬಳಿಯ ಮುಸಿ ನದಿಯಲ್ಲಿ ರಾತ್ರಿ ವೇಳೆ ಪತ್ತೆ ಹಚ್ಚಿದ್ದಾರೆ.
ನಿಧಿ ಕಂಡಾಗ ಮೀನುಗಾರರ ಗುಂಪು ದಿಗ್ಭ್ರಮೆಗೊಂಡಿದೆ. ಯಾಕೆಂದರೆ, ನಿಧಿಯು ಅಮೂಲ್ಯವಾದ ರತ್ನಗಳು, ಚಿನ್ನದ ಉಂಗುರಗಳು, ನಾಣ್ಯಗಳು ಮತ್ತು ಸನ್ಯಾಸಿಗಳು ಬಳಸುವ ಕಂಚಿನ ಗಂಟೆಗಳು ಸಿಕ್ಕಿವೆ. ಇನ್ನು 8ನೇ ಶತಮಾನದ್ದು ಎಂದು ಹೇಳಲಾದ ಲಕ್ಷಾಂತರ ಮೌಲ್ಯ ಬೆಲೆಬಾಳುವ ಆಭರಣದಿಂದ ತಯಾರಿಸಿರುವ ಬುದ್ಧನ ಪ್ರತಿಮೆ ದೊರೆತಿದೆ.
ಈ ಕಲಾಕೃತಿಗಳು 7 ನೇ ಮತ್ತು 13 ನೇ ಶತಮಾನದ ನಡುವಿನ ಪ್ರಬಲ ಸಾಮ್ರಾಜ್ಯವಾದ ಶ್ರೀವಿಜಯ ನಾಗರಿಕತೆಗೆ ಹಿಂದಿನವು ಎಂದು ಹೇಳಲಾಗಿದೆ. ಇದು ಒಂದು ಶತಮಾನದ ನಂತರ ನಿಗೂಢವಾಗಿ ಕಣ್ಮರೆಯಾಯಿತು ಎನ್ನಲಾಗಿದೆ. ಕುತೂಹಲಕಾರಿ ವಿಷಯವೆಂದರೆ, ಈ ಸಾಮ್ರಾಜ್ಯವು ಭಾರತದೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿತ್ತು ಎನ್ನಲಾಗಿದೆ.
ಇದೀಗ ದೊರೆತಿರುವ ಆಭರಣಗಳು ಮತ್ತು ಕಲಾಕೃತಿಗಳ ಆವಿಷ್ಕಾರವು ಶ್ರೀವಿಜಯ ಸಾಮ್ರಾಜ್ಯ ಕಾಲ್ಪನಿಕವಲ್ಲ ಎಂಬುದಕ್ಕೆ ಪುರಾವೆಯಾಗಿದೆ ಎಂದು ಬ್ರಿಟಿಷ್ ಕಡಲ ಪುರಾತತ್ವಶಾಸ್ತ್ರಜ್ಞ ಡಾ ಸೀನ್ ಕಿಂಗ್ಸ್ಲೆ ಹೇಳಿದ್ದಾರೆ.
ಸೀನ್ ಪ್ರಕಾರ, ಈ ಸಾಮ್ರಾಜ್ಯದಲ್ಲಿನ ಜನರು ಮರದ ದೋಣಿಗಳನ್ನು ತಯಾರಿಸುತ್ತಿದ್ದರು ಮತ್ತು ಬಳಸುತ್ತಿದ್ದರು. ಈ ನಾಗರಿಕತೆ ಕೊನೆಗೊಂಡಾಗ, ಮರದ ಮನೆಗಳು, ಅರಮನೆಗಳು ಮತ್ತು ದೇವಾಲಯಗಳು ಸಹ ಅವರೊಂದಿಗೆ ಮುಳುಗಿದವು ಎನ್ನಲಾಗಿದೆ.
ಆ ಕಾಲದ ಹಳೆಯ ಪಾತ್ರೆಗಳು ಮತ್ತು ಹರಿವಾಣಗಳು ಸಹ ಕಂಡುಬಂದಿವೆ ಎಂದು ಡಾ ಕಿಂಗ್ಸ್ಲಿ ಹೇಳಿದ್ದಾರೆ. ಇದು ಅಂದಿನ ಜನರು ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.