ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ ವಿಸ್ತರಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದರಿಂದ ನಿರಾಸೆಯಾಗಿದೆ. ಅಂತವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಜುಲೈ 31ನ್ನು ಮಿಸ್ ಮಾಡಿಕೊಂಡವರಿಗೆ ಇದೀಗ ದಂಡ ಮತ್ತು ಬಡ್ಡಿ ಸಮೇತ 2023ರ ಡಿಸೆಂಬರ್ 31ರವರೆಗೆ ಆದಾಯ ತೆರಿಗೆ ರಿಟರ್ನ್ಸ್ (ಬಿಲೇಟೆಡ್ ರಿಟರ್ನ್ಸ್) ಸಲ್ಲಿಕೆಗೆ ಅವಕಾಶವಿದ್ದು, ತೆರಿಗೆ ಪಾವತಿದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
5 ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಆದಾಯ ಹೊಂದಿರುವವರು 5,000 ರೂಪಾಯಿ ಹಾಗೂ 5 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಆದಾಯ ಹೊಂದಿರುವವರು 1,000 ರೂಪಾಯಿಗಳವರೆಗೆ ದಂಡ ಹಾಗೂ ಬಡ್ಡಿ ಪಾವತಿಸಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ.
ಗಡುವನ್ನು ತಪ್ಪಿಸಿಕೊಂಡ ತೆರಿಗೆದಾರರು ತಡವಾಗಿ ಐಟಿಆರ್ ಸಲ್ಲಿಸುವ ಆಯ್ಕೆಯನ್ನು ಹೊಂದಿದ್ದಾರೆ. ತಡವಾಗಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ 2022-23ರ ಹಣಕಾಸು ವರ್ಷಕ್ಕೆ (ಎವೈ 2023-24) ಡಿಸೆಂಬರ್ 31 ಆಗಿದೆ. ನಿಗದಿತ ದಿನಾಂಕದ ನಂತರ (ಅಂದರೆ ಜುಲೈ 31) ಮತ್ತು ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಐಟಿಆರ್ ಸಲ್ಲಿಸಿದರೆ, ವಿಳಂಬ ಫೈಲಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್ ಪ್ರಕಾರ, ನೀವು ಜುಲೈ 31 ರ ನಿಗದಿತ ದಿನಾಂಕದ ನಂತರ ನಿಮ್ಮ ಐಟಿಆರ್ ಅನ್ನು ಸಲ್ಲಿಸಿದರೆ, ಆದರೆ ಡಿಸೆಂಬರ್ 31, 2023 ರ ಮೊದಲು, ನೀವು ಗರಿಷ್ಠ 5,000 ರೂ.ಗಳ ದಂಡವನ್ನು ಕಟ್ಟಬೇಕಾಗುತ್ತದೆ. ಒಟ್ಟು 5 ಲಕ್ಷ ರೂ.ವರೆಗಿನ ಆದಾಯ ಹೊಂದಿರುವವರು 1,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.