ಸಲೂನ್ಗೆ ಹೋಗಿ ಕೂದಲನ್ನ ಕತ್ತರಿಸಿ ಅದಕ್ಕೆ ಬಣ್ಣ ಹಚ್ಚಿಸಿಕೊಳ್ಳಲು ಅಬ್ಬಬ್ಬಾ ಅಂದರೆ ನೀವು ಎಷ್ಟು ಹಣವನ್ನ ವ್ಯಯಿಸೋಕೆ ತಯಾರಿದ್ದೀರಿ..? ದೊಡ್ಡ ದೊಡ್ಡ ಸಲೂನ್ಗಳಲ್ಲಿ ಈ ಹಣ ಹೆಚ್ಚೇ ಇರುತ್ತದೆ.
ಅದೇ ರೀತಿ ಕ್ಯಾಲಿಫೋರ್ನಿಯಾ ಮೂಲದ ಪ್ರಸಿದ್ಧ ಕೇಶ ವಿನ್ಯಾಸಕಿ ಜಾಸ್ಮಿನ್ ಪೊಲಿಕಾರ್ಪೋ ಪ್ರತಿ ಗಂಟೆಗೆ ಗ್ರಾಹಕರಿಗೆ 11 ಸಾವಿರ ರೂಪಾಯಿ ಬಿಲ್ ಮಾಡುತ್ತಾರೆ. ಇದೇ ಲೆಕ್ಕದಲ್ಲಿ ಬರೋಬ್ಬರಿ 13 ಗಂಟೆಗಳ ಕಾಲ ಕೂದಲಿನ ವಿನ್ಯಾಸ ಮಾಡಿಕೊಂಡ ಮಹಿಳೆಗೆ ಬರೋಬ್ಬರಿ 1.44 ಲಕ್ಷ ರೂಪಾಯಿ ಚಾರ್ಜ್ ವಿಧಿಸಲಾಗಿದೆ.
ಜಾಸ್ಮಿನ್ ಕೆಲದಿನದ ಹಿಂದಷ್ಟೇ ಗ್ರಾಹಕರೊಬ್ಬರ ವಿಡಿಯೋವನ್ನ ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ಗ್ರಾಹಕಿಯ ಕೂದಲನ್ನ ಎಷ್ಟು ಚೆನ್ನಾಗಿ ಮಾರ್ಪಾಡು ಮಾಡಿದ್ದೇನೆ ಎಂಬುದನ್ನ ತೋರಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಈಕೆ ಕೂದಲು ಕತ್ತರಿಸಿ ಬಣ್ಣ ಹಾಕಲು ವಿಧಿಸುವ ಬೆಲೆಯನ್ನ ಕೇಳಿ ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಕಮೆಂಟ್ ಸೆಕ್ಷನ್ನಲ್ಲಿ ಅನೇಕರು ಅಬ್ಬಾ ಐ ಫೋನ್ಗಿಂತಲೂ ದುಬಾರಿ ಹಣವಿದು ಎಂದು ಮೂಗು ಮುರಿದಿದ್ದಾರೆ.