ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ 25 ಕೆಜಿ ವರೆಗಿನ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇಕಡ 5 ರಷ್ಟು ಜಿ.ಎಸ್.ಟಿ. ವಿಧಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಕ್ಕಿ, ಬೇಳೆ ಮತ್ತು ಹಾಲಿನ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವುದರಿಂದ ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ಹೇಳಲಾಗಿತ್ತು.
ಅಕ್ಕಿ ಗಿರಣಿ ಮಾಲೀಕರು ಸಹ ಪ್ರತಿಭಟನೆ ನಡೆಸಿ ಜಿ.ಎಸ್.ಟಿ. ವಿಧಿಸಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ಆದರೆ ಕೇಂದ್ರ ಸರ್ಕಾರ ಜಿ.ಎಸ್.ಟಿ. ವಿಧಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇದೀಗ ಗಿರಣಿ ಮಾಲೀಕರು ಜಿ.ಎಸ್.ಟಿ. ಹೊರೆಯಿಂದ ಪಾರಾಗಲು ಹೊಸ ಪ್ಲಾನ್ ಮಾಡಿದ್ದಾರೆ.
25 ಕೆಜಿ ಬದಲು 26 ಕೆಜಿ ಅಕ್ಕಿ ಚೀಲವನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಿದ್ದು, ಇದರಿಂದ ಜಿ.ಎಸ್.ಟಿ. ಹೊರೆಯೂ ತಪ್ಪಿದಂತಾಗುತ್ತದೆ. ಜೊತೆಗೆ ಗ್ರಾಹಕರಿಗೂ ಅನುಕೂಲವಾಗುತ್ತದೆ ಎಂಬ ಚಿಂತನೆ ಇದರ ಹಿಂದೆ ಇದ್ದು, ಇದಕ್ಕೆ ಈಗಾಗಲೇ ತಯಾರಿ ನಡೆದಿದೆ ಎನ್ನಲಾಗಿದೆ.