ಮದುವೆ ಕಾರ್ಯಕ್ರಮದಲ್ಲಿ ವಧುವಿನ ಕಡೆಯವರು ಮಟನ್ ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ವರ ಮದುವೆಯನ್ನೇ ನಿರಾಕರಿಸಿದ ಘಟನೆ ಜೈಪುರದಲ್ಲಿ ನಡೆದಿದೆ. 27 ವರ್ಷದ ರಮಾಕಾಂತ್ ಪಾತ್ರ ಎಂಬಾತ ಮದುವೆ ನಿಲ್ಲಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಇನ್ನೊಂದು ಯುವತಿಯನ್ನ ವರಿಸಿದ್ದಾನೆ.
ವರ ರಮಾಕಾಂತ್ ಮದುವೆ ದಿಬ್ಬಣ ಸಮೇತ ಬಂದಗಾಂವ್ ಗ್ರಾಮಕ್ಕೆ ಬಂದಿದ್ದ. ವರನ ಕುಟುಂಬಸ್ಥರನ್ನ ಸ್ವಾಗತಿಸಿ ವಧುವಿನ ಕುಟುಂಬ ಬಳಿಕ ಇವರನ್ನ ಕಲ್ಯಾಣ ಮಂಟಪಕ್ಕೆ ಕರೆದೊಯ್ದಿತ್ತು. ಒಂದಷ್ಟು ಶಾಸ್ತ್ರಗಳನ್ನ ಮಾಡಿದ ನಂತರ ವರನ ಕುಟುಂಬಸ್ಥರು ಊಟದ ಹಾಲ್ಗೆ ತೆರಳಿದ್ರು.
ಊಟ ಬಡಿಸುವ ಮುಂಚೆಯೇ ವರನ ಕುಟುಂಬಸ್ಥರು ಮಟನ್ ಸಾರಿಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಅದನ್ನ ವಧುವಿನ ಕುಟುಂಬಸ್ಥರು ತಯಾರಿಸಿರಲಿಲ್ಲ. ಇಲ್ಲಿಂದ ಶುರುವಾದ ವಾದ – ವಿವಾದ ಬಳಿಕ ಮದುವೆ ನಿಲ್ಲಿಸುವವರೆಗೆ ಹೋಗಿದೆ.
ವಧುವಿನ ಕುಟುಂಬಸ್ಥರು ಮದುವೆಯನ್ನ ನಿಲ್ಲಿಸದಂತೆ ವರನ ಬಳಿ ಬೇಡಿಕೊಂಡಿದ್ದಾರೆ. ಆದರೆ ಇದಕ್ಕೆ ಜಗ್ಗದ ರಮಾಕಾಂತ್ ತನ್ನ ಕುಟುಂಬಸ್ಥರ ಮನೆಗೆ ತೆರಳಿ ಒಂದು ರಾತ್ರಿ ಉಳಿದಿದ್ದಾನೆ. ಅಲ್ಲಿಂದ ತನ್ನ ಮನೆಗೆ ವಾಪಸ್ಸಾಗುವ ವೇಳೆಯಲ್ಲಿ ಇನ್ನೊಬ್ಬ ಯುವತಿಯನ್ನ ವರಿಸಿದ್ದಾನೆ. ಈ ಸಂಬಂಧ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.