ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ಮನೆಯೊಂದಕ್ಕೆ ನುಗ್ಗಿ ಕುಟುಂಬವನ್ನು ಒತ್ತೆ ಇಟ್ಟುಕೊಂಡು ಚಿನ್ನಾಭರಣಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಜರುಗಿದೆ.
ಸೋಮವಾರ ಮುಂಜಾವಿನ 1 ಗಂಟೆಯ ಸಂದರ್ಭದಲ್ಲಿ ಮನೆಯ ಛಾವಣಿ ಮೇಲಿಂದ ಒಳಗೆ ನುಗ್ಗಿದ ನಾಲ್ವರ ಗುಂಪೊಂದು ಕೋಣೆಯಲ್ಲಿ ಮಲಗಿದ್ದ ಸಂದೀಪ್ (19) ಮೇಲೆ ಹಲ್ಲೆ ಮಾಡಿದೆ. ಮನೆಯೊಳಗೆ ಮೂವರು ನುಗ್ಗಿದರೆ ನಾಲ್ಕನೇ ಡಕಾಯಿತ ಮೇಲ್ಛಾವಣಿ ಮೇಲೆ ನಿಂತು ಸುತ್ತಲೂ ಗಮನಿಸುತ್ತಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮನೆಯೊಳಗೆ ನುಗ್ಗಿದ ಮೂವರ ಬಳಿ ನಾಡ ಪಿಸ್ತೂಲ್‌ಗಳಿದ್ದವು. ಮಗ ಸಂದೀಪ್‌ನ ರಕ್ಷಣೆಗೆ ಬಂದ ಸಹೋದರ ಪ್ರತೀಕ್ ಹಾಗೂ ಹೆತ್ತವರನ್ನೂ ಸಹ ಒತ್ತೆ ಪಡೆದ ಡಕಾಯಿತರು 20,000 ರೂಪಾಯಿಗಳ ಬೇಡಿಕೆ ಇಟ್ಟಿದ್ದಾರೆ. ಮೆಟ್ಟಿಲ ಕೆಳಗೆ ಇಳಿದು ಹೋದ ಪ್ರತೀಕ್ ದುಡ್ಡು ತರಲು ಹೋದಾಗ, ಸಹೋದರ ಸಂಬಂಧಿ ನೀರಜ್‌ಗೆ ಕರೆ ಮಾಡಿ ಮನೆಯಲ್ಲಿ ಏನಾಗುತ್ತಿದೆ ಎಂದು ವಿವರಿಸಿದ್ದಾನೆ.
ಆಗಸ್ಟ್ 15 ರಂದು ಉಚಿತ ಪೆಟ್ರೋಲ್; ಆಧಾರ್ ಕಾರ್ಡ್ ತೋರಿಸಿ 5 ಲೀಟರ್ ತೈಲ ಪಡೆಯಲು ಆಫರ್
“ಇದಾದ ಮೇಲೆ ಅವರಲ್ಲಿ ಇಬ್ಬರು ನನ್ನನ್ನು ಕೆಳಗೆ ಎಳೆದೊಯ್ದು ಗನ್ ತೋರಿಸಿ ಚಿನ್ನಾಭರಣ ಇಟ್ಟಿರುವ ಜಾಗ ಎಲ್ಲಿ ಎಂದು ಕೇಳಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ ಈ ಮಂದಿ, ಕೈ ಮೇಲೆ ಇರಿದಿದ್ದಾರೆ,” ಎಂದು ಪ್ರತೀಕ್ ತಿಳಿಸಿದ್ದಾರೆ.
ಮನೆಯ ಮುಂದೆ ಗ್ರಾಮಸ್ಥರು ನೆರೆಯುತ್ತಲೇ ಡಕಾಯಿತರು ಗನ್‌ನಿಂದ ಬುಲೆಟ್ ಒಂದನ್ನು ಗಾಳಿಯಲ್ಲಿ ಫೈರ್ ಮಾಡಿದ್ದಾರೆ. ಕೂಡಲೇ 1.3 ಲಕ್ಷ ರೂಪಾಯಿ ಹಾಗೂ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಆಪಾದಿತರು ಸ್ಥಳದಿಂದ ಪರಾರಿಯಾಗಿದ್ದಾರೆ.
ನಾಲ್ಕನೇಯವನು ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದು, ಆತನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಲಾಗಿದೆ. ಈತನ ಹೇಳಿಕೆ ಆಧರಿಸಿ ಮತ್ತಿಬ್ಬರು ಸಹಚರರಾದ ಚಂಚಲ್ ಹಾಗೂ ವಿಕಾಸ್‌ರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆಪಾದಿತನನ್ನು ವಶಕ್ಕೆ ಪಡೆಯಲು ಪೊಲೀಸರು ಜಾಲ ಬೀಸಿದ್ದಾರೆ.