ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಎಷ್ಟರಮಟ್ಟಿಗೆ ತಾಂಡವವಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದನ್ನು ಜ್ವಲಂತವಾಗಿ ಬಿಂಬಿಸುವ ವಿಷಯವನ್ನು ಖುದ್ದು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದ್ದು, ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಉದ್ಯೋಗ ಕೋರಿ ಬರೋಬ್ಬರಿ 22 ಕೋಟಿ ಅರ್ಜಿಗಳು ಬಂದಿವೆ ಎನ್ನಲಾಗಿದ್ದು, ಈ ಪೈಕಿ ಆಯ್ಕೆಯಾದವರು ಕೇವಲ 7.22 ಲಕ್ಷ ಮಂದಿ ಮಾತ್ರ.
ಲೋಕಸಭೆಯಲ್ಲಿ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಸದಸ್ಯರೊಬ್ಬರ ಪ್ರಶ್ನೆಗೆ ಲಿಖಿತ ಉತ್ತರ ಒದಗಿಸಿದ್ದು 2014-15ರಿಂದ 2021-22 ರ ವರೆಗೆ ಕೇಂದ್ರ ಸರ್ಕಾರ ಉದ್ಯೋಗ ಕೋರಿ 22.05 ಕೋಟಿ ಅರ್ಜಿಗಳು ಬಂದಿದ್ದು, ಈ ಪೈಕಿ 7.2 ಲಕ್ಷ (0.33%) ಮಂದಿಗೆ ಉದ್ಯೋಗ ಒದಗಿಸಲಾಗಿದೆ ಎಂದಿದ್ದಾರೆ. ಇದರಲ್ಲಿ 2019-20 ರ ಸಾಲಿನಲ್ಲಿ ಮಾತ್ರ ಅತಿ ಹೆಚ್ಚು ಅಂದರೆ 1.47 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿದೆ.
ಎಂಟು ವರ್ಷಗಳಲ್ಲಿ ಉದ್ಯೋಗ ಪಡೆದ 7.22 ಲಕ್ಷ ಮಂದಿ ಪೈಕಿ ವರ್ಷವಾರು ವಿವರ ಇಂತಿದ್ದು, 2015-16 ರಲ್ಲಿ 1.11 ಲಕ್ಷ ಮಂದಿ, 2016-17 ರಲ್ಲಿ 1.01 ಲಕ್ಷ ಮಂದಿ, 2017-18 ರಲ್ಲಿ 76,147 ಮಂದಿ,2018-19 ರಲ್ಲಿ 38,100 ಮಂದಿ, 2020-21 ರಲ್ಲಿ 78,555 ಮಂದಿ ಹಾಗೂ 2021-22 ರಲ್ಲಿ 38,850 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ.