
ರಾಜ್ಯದಲ್ಲಿ ಬೈ ಎಲೆಕ್ಷನ್ ಭರಾಟೆ ಜೋರಾಗಿದ್ದು, ರಾಜಕೀಯ ಪಕ್ಷಗಳು ಪರಸ್ಪರ ಆರೋಪ – ಪ್ರತ್ಯಾರೋಪಗಳಲ್ಲೇ ನಿರತವಾಗಿವೆ. ಸಿಂದಗಿ ಉಪ ಚುನಾವಣಾ ಕಣದಲ್ಲಿ ಪಕ್ಷದ ಅಭ್ಯರ್ಥಿಯ ಪ್ರಚಾರ ಕಾರ್ಯ ಕೈಗೊಂಡ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಯನ್ನೇಗೈದರು.
ದೇಶದಲ್ಲಿ ಚುನಾವಣೆ ಬಂದಾಗ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ಹಾಗೂ ದಲಿತರ ಬಗ್ಗೆ ಕನಿಕರ ಹುಟ್ಟುತ್ತೆ. ನಿಜ ಹೇಳಬೇಕು ಅಂದರೆ ಈ ಎರಡೂ ಸಮುದಾಯಕ್ಕೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್. ಗುಲಾಂ ನಬಿ ಆಜಾದ್, ಸಂಜಯ್ ಗಾಂಧಿ ಕಾಲದಿಂದ ಕಾಂಗ್ರೆಸ್ನಲ್ಲಿ ಇದ್ದಾರೆ. ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಆದರೆ ಮಾಡಿಲ್ಲ. ಅನೇಕ ವರ್ಷಗಳಿಂದ ಆಜಾದ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಮಾಡಿ ತೋರಿಸಲಿ ಎಂದು ಕಾರಜೋಳ ಬಹಿರಂಗ ಸವಾಲು ಎಸೆದಿದ್ದಾರೆ.
ಕಾಂಗ್ರೆಸ್ಸಿಗರ ಮೋಸದ ಆಟ ಇನ್ನು ನಡೆಯೋದಿಲ್ಲ. ಸಿಂದಗಿ ಹಾಗೂ ಹಾನಗಲ್ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಮುಖಂಡರು ಏನೆಲ್ಲ ಮಾತನಾಡುತ್ತಿದ್ದಾರೆ. ಬಿಜೆಪಿ 1 ಮತಕ್ಕೆ 2 ಸಾವಿರ ರೂಪಾಯಿ ನೀಡುತ್ತಿದೆ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಹಣ- ಹೆಂಡ ಹಂಚಿ ಅಧಿಕಾರ ಸಾಧಿಸಿದ್ದು ಕಾಂಗ್ರೆಸ್. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಮಾವಶೇಷವಾಗಿದೆ ಎಂದು ಗುಡುಗಿದರು.