ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅಪಘಾತ ತಡೆಯಲು ಕೇಂದ್ರ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರ್ತಿದೆ. ಕಾರಿನಲ್ಲಿರಬೇಕಾದ ಸುರಕ್ಷತಾ ವ್ಯವಸ್ಥೆ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಭಾರತದ ರಸ್ತೆಯಲ್ಲಿ ಓಡುವ ಎಲ್ಲ ಕಾರುಗಳಲ್ಲಿ ಕನಿಷ್ಠ 6 ಏರ್ ಬ್ಯಾಗ್ ಇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಆರು ಏರ್‌ಬ್ಯಾಗ್‌ಗಳು ನಿಸ್ಸಂದೇಹವಾಗಿ ಕಾರಿನಲ್ಲಿರುವ ಪ್ರಯಾಣಿಕರಿಗೆ ರಕ್ಷಣೆ ನೀಡುತ್ತದೆ. ಆದರೆ ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ. ಒಂದು ವೇಳೆ ಇದು ಜಾರಿಗೆ ಬಂದಲ್ಲಿ ಕಾರಿನ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.
ಕಾರಿನಲ್ಲಿ ಮುಂಭಾಗದಲ್ಲಿ ಏರ್‌ಬ್ಯಾಗ್ ಅಳವಡಿಸಲು ಸರಾಸರಿ 5,000-8000 ರೂಪಾಯಿ ವೆಚ್ಚವಾಗುತ್ತದೆ. ಮುಂಭಾಗಕ್ಕಿಂತ ಅಕ್ಕ ಪಕ್ಕದ ಏರ್ ಬ್ಯಾಗ್ ವೆಚ್ಚ ಹೆಚ್ಚಾಗುತ್ತದೆ. ಆರು ಏರ್ ಬ್ಯಾಗ್ ಅಳವಡಿಸಿದಲ್ಲಿ ಸಣ್ಣ ಮತ್ತು ಮಧ್ಯಮ ವಿಭಾಗದ ಕಾರಿನ ಬೆಲೆ ಸುಮಾರು 30,000 ದಿಂದ 50,000 ರೂಪಾಯಿ ಹೆಚ್ಚಾಗಲಿದೆ.
ಭಾರತದಲ್ಲಿ ಎಂಟ್ರಿ ಲೇವಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಭಾರತದಲ್ಲಿ ಹಿಂಬದಿ ಸೀಟುಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಸಾಮಾನ್ಯವಾಗಿ ಸೀಟ್ ಬೆಲ್ಟ್ ಬಳಸುವುದಿಲ್ಲ. ಅಪಘಾತದ ಸಮಯದಲ್ಲಿ ಸೀಟ್ ಬೆಲ್ಟ್ ಇಲ್ಲದೆ ಏರ್ ಬ್ಯಾಗ್ ಗಳು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಆದಾಗ್ಯೂ 6 ಏರ್‌ಬ್ಯಾಗ್‌ಗಳು ಹಿಂಬದಿ ಪ್ರಯಾಣಿಕರಿಗೆ ಸುರಕ್ಷತೆ ನೀಡಬಲ್ಲವು. ಆರು ಏರ್ ಬ್ಯಾಗ್, ಅಪಘಾತದ ಸಾವಿನ ಸಂಖ್ಯೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡಲಿದೆ.