ಬೆಂಗಳೂರು: 7ನೇ ವೇತನ ಆಯೋಗ ವರದಿ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಜಾರಿಗೊಳಿಸಿದೆ. ಈ ಮೂಲಕ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದ್ದು, ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವ ಬಗ್ಗೆ ಸಮಿತಿಯನ್ನು ರಚಿಸಲಾಗಿದೆ.
ಇದರ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರಿ ನೌಕರರ ವೈದ್ಯಕೀಯ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗುವವರೆಗೂ ವೈದ್ಯಕೀಯ ಭತ್ಯೆ ಮಾಸಿಕ 200 ರೂ.ನಿಂದ 500 ರೂ.ವರೆಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಆದೇಶ ಹೊರಡಿಸಲಾಗಿದೆ. ಸರ್ಕಾರದ ನೀತಿಯಲ್ಲಿ ವಿವರಿಸಿದಂತೆ ಸದರಿ ಯೋಜನೆ ಅನುಷ್ಠಾನಗೊಳಿಸಲು ಮಾರ್ಗಸೂಚಿ ಹೊರಡಿಸಲಾಗಿದೆ.
ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆ ದರ ಪರಿಷ್ಕರಣೆ ಬಗ್ಗೆ 7ನೇ ವೇತನ ಆಯೋಗ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ. ಅಂತೆಯೇ ಆದೇಶ ಹೊರಡಿಸಲಾಗಿದೆ. ಆಗಸ್ಟ್ 1. 2024 ರಿಂದ ಜಾರಿಗೆ ಬರುವಂತೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯ ಇರುವ ವೈದ್ಯಕೀಯ ಭತ್ಯೆ ದರಗಳನ್ನು ಮಾಸಿಕ 200 ರೂ, ನಿಂದ 500ರೂ,ಗೆ ಪರಿಷ್ಕರಿಸಲಾಗಿದೆ, ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಸೌಲಭ್ಯ ಅನುಷ್ಠಾನಗೊಳ್ಳುವವರೆಗೆ ಈ ವೈದ್ಯಕೀಯ ಸೌಲಭ್ಯ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.