ಕೊರೊನಾ ಎರಡನೆ ಅಲೆಯಿಂದ ತತ್ತರಿಸಿದ್ದ ರಾಜ್ಯದಲ್ಲಿ ಲಾಕ್ಡೌನ್ ಆದೇಶ ಜಾರಿಗೆ ಬಂದ ಬಳಿಕ ಸಾಕಷ್ಟು ಕಡೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಸದ್ಯ ಇರುವ ಆದೇಶದ ಪ್ರಕಾರ ಜೂನ್ 14ರ ಬೆಳಗ್ಗೆ 6 ಗಂಟೆಯವರೆಗೂ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಆದರೆ ಲಾಕ್ಡೌನ್ ವಿಸ್ತರಣೆ ವಿಚಾರವಾಗಿ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಈ ನಡುವೆ ಸಂಜೆ 6 ಗಂಟೆಗೆ ಸಿಎಂ ಯಡಿಯೂರಪ್ಪ ಸಚಿವರ ಜೊತೆ ಸಭೆ ಕರೆದಿದ್ದು ಸಭೆ ಬಳಿಕ್ ಲಾಕ್ಡೌನ್ ಭವಿಷ್ಯದ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಸದ್ಯದ ಮಾಹಿತಿಯ ಪ್ರಕಾರ ಜೂನ್ 14ರಿಂದ ಒಂದು ವಾರಗಳ ಕಾಲ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್ ಆದೇಶ ಮುಂದುವರಿಯುವ ಸಾಧ್ಯತೆ ಇದೆ. ಆಯಾ ಜಿಲ್ಲೆಗಳ ಡಿಸಿಗಳು ನೀಡಿರುವ ಕೊರೊನಾ ವಿವರಗಳನ್ನ ಆಧರಿಸಿ ಸರ್ಕಾರ ಜಿಲ್ಲಾವಾರು ಲಾಕ್ಡೌನ್ ಆದೇಶ ಜಾರಿಗೆ ತರಲಿದೆ ಎನ್ನಲಾಗ್ತಿದೆ.
ಶಿವಮೊಗ್ಗ, ತುಮಕೂರು, ಬೆಳಗಾವಿ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಧಾರವಾಡ, ಚಿಕ್ಕಮಗಳೂರಿನಲ್ಲಿ ಸೋಂಕಿನ ಪ್ರಮಾಣ ಇನ್ನೂ ಜಾಸ್ತಿಯೇ ಇರೋದ್ರಿಂದ ಇಲ್ಲಿ ಜೂನ್ 21ರವರೆಗೂ ಲಾಕ್ಡೌನ್ ಆದೇಶ ಮುಂದುವರಿಯಲಿದೆ ಎಂದು ಹೇಳಲಾಗ್ತಾ ಇದೆ. ಸಚಿವರ ಜೊತೆಗಿನ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಹೊಸ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆ ಇದೆ.