ಪತ್ನಿಯ ಸ್ವಚ್ಛತೆಯ ಗೀಳಿನಿಂದ ಬೇಸತ್ತ ಪತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಮುಂದಾದ ವಿಚಿತ್ರ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಗೆ ಸ್ವಚ್ಛತೆಯ ಹುಚ್ಚು ಎಷ್ಟರಮಟ್ಟಿಗೆ ಇದೆ ಅಂದರೆ ಆಕೆ ಒಮ್ಮೆ ಡಿಟರ್ಜೆಂಟ್ನಿಂದ ತನ್ನ ಟೆಕ್ಕಿ ಪತಿಯ ಫೋನ್ ಹಾಗೂ ಲ್ಯಾಪ್ ಟಾಪ್ನ್ನು ತೊಳೆದಿದ್ದಾಳೆ.
ಬೆಂಗಳೂರಿನ ಆರ್ಟಿ ನಗರದ ನಿವಾಸಿಯಾದ ರಾಹುಲ್ ಹಾಗೂ ಸುಮನ್( ಹೆಸರು ಬದಲಿಸಲಾಗಿದೆ) 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕ ಇಬ್ಬರು ಇಂಗ್ಲೆಂಡ್ಗೆ ತೆರಳಿದ್ದರು. ವೃತ್ತಿಯಲ್ಲಿ ರಾಹುಲ್ ಟೆಕ್ಕಿಯಾಗಿದ್ದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಮನ್ ತನ್ನ ಮನೆಯನ್ನು ಅತಿಯಾಗಿ ಶುಚಿಗೊಳಿಸುತ್ತಿರೋದನ್ನು ಕಂಡು ಆರಂಭದಲ್ಲಿ ರಾಹುಲ್ ಕೂಡ ಅತಿಯಾಗಿ ಖುಷಿಗೊಂಡಿದ್ದರು.
ಮದುವೆಯಾಗಿ ಎರಡು ವರ್ಷಗಳ ಬಳಿಕ ಮೊದಲ ಮಗುವಿನ ಜನನವಾಯಿತು. ಒಸಿಡಿ ಸಮಸ್ಯೆ ಹೊಂದಿದ್ದ ಸುಮನ್ರ ಅತಿಯಾದ ಸ್ವಚ್ಛತೆ ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನು ತಂದೊಡ್ಡಲು ಆರಂಭಿಸಿತು. ಎಂಬಿಎ ಪದವೀಧರೆಯಾಗಿದ್ದ ಸುಮನ್, ಪತಿ ಆಫೀಸಿನಿಂದ ಬರುತ್ತಿದ್ದಂತೆಯೇ ಬಟ್ಟೆ, ಚಪ್ಪಲಿ ಹಾಗೂ ಮೊಬೈಲ್ ಸ್ವಚ್ಛ ಮಾಡಲೇಬೇಕೆಂದು ಒತ್ತಾಯಿಸುತ್ತಿದ್ದರು. ಇದರಿಂದ ಅತಿಯಾಗಿ ಕಿರಿಕಿರಿಕೊಂಡ ರಾಹುಲ್ ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
ಇಂಗ್ಲೆಂಡ್ನಿಂದ ಮರಳಿದ ದಂಪತಿ ಫ್ಯಾಮಿಲಿ ಕೌನ್ಸೆಲಿಂಗ್ ಪಡೆದುಕೊಂಡರು. ಬಳಿಕ ಇನ್ನೊಂದು ಮಗುವಿನ ಜನನವಾಯಿತು. ಖುಷಿಯಲ್ಲೇ ಇದ್ದ ಈ ದಂಪತಿ ಕೋವಿಡ್ 19 ಸಂದರ್ಭದಲ್ಲಿ ಮತ್ತೊಂದು ತಿರುವು ಪಡೆದುಕೊಂಡಿತು. ಒಸಿಡಿ ಸಮಸ್ಯೆ ಮಿತಿಮೀರಿದ ಹಿನ್ನೆಲೆಯಲ್ಲಿ ಸುಮನ್ ಮನೆಯಲ್ಲಿದ್ದ ಒಂದೊಂದು ವಸ್ತುವನ್ನೂ ತೊಳೆಯಲು ಆರಂಭಿಸಿದ್ರು.
ಲಾಕ್ಡೌನ್ ಸಂದರ್ಭದಲ್ಲಿ ಪತಿ ವರ್ಕ್ ಫ್ರಮ್ ಹೋಮ್ ಆರಂಭಿಸಿದ್ದರು. ಈಕೆ ಪತಿಯ ಲ್ಯಾಪ್ಟಾಪ್ ಮೊಬೈಲ್ನೆಲ್ಲ ಡಿಟರ್ಜಂಟ್ ಹಾಕಿ ತೊಳೆದಿದ್ದಳು. ಅಲ್ಲದೇ ಈಕೆ ದಿನಕ್ಕೆ ಆರಕ್ಕೂ ಹೆಚ್ಚು ಬಾರಿ ಸ್ನಾನ ಮಾಡುತ್ತಿದ್ದಳಂತೆ..!
ಇಷ್ಟಕ್ಕೆ ಮುಗಿಯಲಿಲ್ಲ. ರಾಹುಲ್ ತಾಯಿ ನಿಧನದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಮನೆಯನ್ನು ಸಂಪೂರ್ಣವಾಗಿ ಶುದ್ಧಪಡಿಸಬೇಕೆಂದು ಸುಮನ್ ಪತಿ ಹಾಗೂ ಮಕ್ಕಳನ್ನು ಮೂವತ್ತು ದಿನಗಳ ಕಾಲ ಮನೆಯಿಂದ ಹೊರ ಹಾಕಿದ್ದರಂತೆ.
ಪತ್ನಿಯ ಈ ಗುಣದಿಂದ ಬೇಸತ್ತಿದ್ದ ಪತಿ ತನ್ನ ಮಕ್ಕಳ ಸಮೇತ ಪೋಷಕರ ಮನೆಗೆ ಶಿಫ್ಟ್ ಆಗಿದ್ದಾರೆ. ಸುಮನ್ ಕೂಡಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಕೌನ್ಸೆಲಿಂಗ್ ವೇಳೆ ಸುಮನ್ ಗೆ ಒಸಿಡಿ ಇದೆ ಎಂದು ತಿಳಿದುಬಂದಿದೆ. ಆದರೆ ಇದನ್ನು ಒಪ್ಪದ ಸುಮನ್ ತನ್ನ ಪತಿಯೇ ಸರಿ ಇಲ್ಲ ಎಂದು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.