alex Certify ರಾಜ್ಯದ ಹಿರಿಯ ನಾಗರಿಕರು, ವಿಕಲಚೇತನರಿಗೆ ಗುಡ್ ನ್ಯೂಸ್ : ʻ ಮನೆ ಬಾಗಿಲಿಗೆ ಬರಲಿವೆ ಈ ಎಲ್ಲಾ ಸರ್ಕಾರಿ ಸೇವೆಗಳುʼ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಹಿರಿಯ ನಾಗರಿಕರು, ವಿಕಲಚೇತನರಿಗೆ ಗುಡ್ ನ್ಯೂಸ್ : ʻ ಮನೆ ಬಾಗಿಲಿಗೆ ಬರಲಿವೆ ಈ ಎಲ್ಲಾ ಸರ್ಕಾರಿ ಸೇವೆಗಳುʼ!

ಬೆಂಗಳೂರು : ರಾಜ್ಯ ಸರ್ಕಾರವು ವಿಕಲಚೇತನರು ಹಾಗೂ ಹಿರಿಯನಾಗರಿಕರಿಗೆ ಸಿಹಿಸುದ್ದಿ, ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಮುಂದಾಗಿದೆ.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಹಾಗೂ ಜನಸ್ನೇಹಿಯನ್ನಾಗಿಸಲು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ನೀಡುವ ಸಲುವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನ ಆಧಾರದಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗಿರುತ್ತದೆ.

ಈ ಯೋಜನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ವಿಕಲಚೇತನರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದರಿಂದ ಪ್ರತಿ ಬುಧವಾರ “ಮನೆ ಬಾಗಿಲಿಗೆ ಸರ್ಕಾರಿ ಸೇವೆ” ಎಂಬ ಕಾರ್ಯಕ್ರಮವನ್ನು ರೂಪಿಸಿ ಪ್ರತಿ ವಿಕಲಚೇತನ ವ್ಯಕ್ತಿಯ ಮನೆಗೆ ಬೇಟಿ ಅವರ ಅವಶ್ಯಕತೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ದೂರಕಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿರುತ್ತದೆ. ಅದರಂತೆ ಮೊದಲನೇಯದಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ

ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಪ್ರಥಮವಾಗಿ ಕೆಳಕಂಡ ಯೋಜನೆಗಳನ್ನು ಆದ್ಯತೆಯ ಮೇರೆಗೆ ದೊರಕಿಸಿಕೊಡುವ ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ.

ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ)

ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿಗಳನ್ನು ನೀಡಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. “ಯುಡಿಐಡಿ ವಿಕಲಚೇತನರ ಮನೆ ಬಾಗಿಲಿಗೆ” ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಮತ್ತು ಜಿಲ್ಲಾ ಕಛೇರಿಯಲ್ಲಿ ಯುಡಿಐಡಿ ಹೆಲ್ಸ್ ಡೆಸ್ಕನ್ನು ಸಹ ರಚಿಸಲಾಗಿರುತ್ತದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಮೆಡಿಕಲ್ ಬೋರ್ಡ್‌ಗಳು ಮತ್ತು ಜಿಲ್ಲಾ ಪುನರ್ವಸತಿ ಕೇಂದ್ರ ಹಾಗೂ ಪುನರ್ವಸತಿ ಕಾರ್ಯಕರ್ತರ ಮೂಲಕ ಹಲವು ಶಿಬಿರಗಳನ್ನು ಆಯೋಜಿಸಲಾಗಿದೆ.

ಪೋಷಣಾ ಭತ್ಯೆ

ವಿಕಲಚೇತನತೆ ಶೇ.40 ರಿಂದ ಶೇ.74 ರವರೆಗೆ 800/- ರೂ.ಗಳು. ಶೇ.75ಕ್ಕೂ ಹೆಚ್ಚಿರುವವರಿಗೆ 1400/- ರೂ.ಗಳನ್ನು ಹಾಗೂ ಶೇ.75ಕ್ಕೂ ಹೆಚ್ಚಿನ ಮನೋವೈಕಲ್ಯ ಹೊಂದಿರುವ ವಿಕಲಚೇತನರಿಗೆ 2000/- ರೂ.ಗಳನ್ನು ಮಾಹೆಯಾನ ಪೋಷಣಾ ಭತ್ಯೆ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನಿರ್ದೇಶನಾಲಯದ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ.

ಸಾಧನಾ ಸಲಕರಣೆ

ವಿಕಲಚೇತನರು ಸಾಮಾನ್ಯ ವ್ಯಕ್ತಿಗಳಂತೆ ಅವರ ದೈನಂದಿನ ಕಾರ್ಯಚಟುವಟಿಕೆಗಳನ್ನು ಮಾಡಲು ಅನುಕೂಲವಾಗುವಂತೆ ತ್ರಿಚಕ್ರವಾಹನಗಳು, ಗಾಲಿಕುರ್ಚಿಗಳು, ಪ್ರೈಸಿಕಲ್, ಕೃತಕ ಅಂಗಾಂಗಗಳು, ಬ್ರೆಲ್ ಗಡಿಯಾರಗಳು, ಬಿಳಿಕೋಲು, ಶ್ರವಣ ಯಂತ್ರಗಳನ್ನು ಹಾಗೂ ಇತರೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.

ಗುಂಪು ರಚನೆ:

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶನದಂತೆ ವಿಕಲಚೇತನರ ಗುಂಪುಗಳನ್ನು ರಚಿಸಿ, ಅವರ ಕಾರ್ಯಚಟುವಟಿಕೆಗಳಿಗೆ ಅವರಲ್ಲಿಯೇ ಬ್ಯಾಂಕಿನ ಖಾತೆಯ ಮೂಲಕ ಹಣವನ್ನು ಉಳಿತಾಯ ಮಾಡಲು ಸಂಘಗಳನ್ನು ರಚಿಸಲು ಉತ್ತೇಜಿಸಲಾಗುತ್ತಿದೆ. ಅದರಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಘಗಳನ್ನು ರಚಿಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.

ವೈದ್ಯಕೀಯ ಪರಿಹಾರ ನಿಧಿ

ತೀವ್ರ ವಿಕಲಚೇತನ ವ್ಯಕ್ತಿಗಳಿಗೆ, ಹಾಸಿಗೆ ಹಿಡಿದಿರುವವರಿಗೆ, ಬೆನ್ನು ಉರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ, ಪಾಶ್ಚವಾಯಿಗಳಿಗೆ ತುತ್ತಾದ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಇಲಾಖೆಯ ಯೋಜನೆಯಾದ ವೈದ್ಯಕೀಯ ಪರಿಹಾರ ನಿಧಿಯಲ್ಲಿ ಗರಿಷ್ಟ ರೂ. 1.00 ಲಕ್ಷದವರೆಗೆ ಶಸ್ತ್ರ ಚಿಕಿತ್ಸಾ ಪರಿಹಾರವನ್ನು ಒದಗಿಸಲಾಗುತ್ತಿದೆ.

ಶೇ.5ಅನುದಾನದ ಸೌಲಭ್ಯದ ಬಗ್ಗೆ:

ವಿಕಲಚೇತನರಿಗೆ ಸ್ಥಳೀಯವಾಗಿ ಸೌಲಭ್ಯಗಳನ್ನು ಒದಗಿಸಿಕೊಡುವ ದೃಷ್ಟಿಯಿಂದ ಸರ್ಕಾರವು ಎಲ್ಲಾ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯನ್ನೊಳಗೊಂಡಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸುವಾಗ ವಿಕಲಚೇತನರಿಗೆ ಶೇ.5ರಷ್ಟು ಅನುದಾನವನ್ನು ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿತ್ತದೆ. ಶೇ.5ರ ಅನುದಾನದಲ್ಲಿ ವಿಕಲಚೇತನರ ಶ್ರೇಯೋಭಿವೃದ್ಧಿಗೆ ವೆಚ್ಚ ಮಾಡುವುದರ ಮೂಲಕ ಅವರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ.

ವಿದ್ಯಾರ್ಥಿ ಯೋಜನೆಗಳು

ವಿದ್ಯಾರ್ಥಿ ವೇತನ:

ವಿಕಲಚೇತನ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಮುಂದುವರೆಸಿ ಸಮಾಜದ ಮುಖ್ಯವಾಹಿನಿಗೆ ಬರಲು ವಿದ್ಯಾರ್ಥಿ ವೇತನವು ಸಹಕಾರಿಯಾಗಿದೆ ಈ ಯೋಜನೆಯಡಿಯಲ್ಲಿ ಒಂದನೇ ತರಗತಿಯಿಂದ ಸ್ನಾತಕೋತ್ತರ ತರಗತಿಗಳಲ್ಲಿ ಓದುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಶುಲ್ಕ ಮರುಪಾವತಿ

ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಶುಲ್ಕ ಮರುಪಾವತಿ ಹಾಗೂ ತಾಂತ್ರಿಕ ಶಿಕ್ಷಣದ ಶುಲ್ಕ ಮರುಪಾವತಿ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲು ಸರ್ಕಾರವು ಆದೇಶ ಹೊರಡಿಸಿದ್ದು, ಯೋಜನೆಯ ಸದುಪಯೋಗ ಪಡೆಯಲು ಆಯಾ ಶೈಕ್ಷಣಿಕ ವರ್ಷದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ವಿದ್ಯಾರ್ಥಿ ಪ್ರೋತ್ಸಾಹ ಬಹುಮಾನ ಯೋಜನೆ

ಪಬ್ಲಿಕ್ ಪರೀಕ್ಷೆಗಳಲ್ಲಿ ಶೇ.60ಕ್ಕಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ವಿಕಲಚೇತನ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಯೋಜನೆಯ ಉದ್ದೇಶವಾಗಿರುತ್ತದೆ. 10ನೇ ತರಗತಿ=3000, 12ನೇ ತರಗತಿ 5000 ಡಿಗ್ರಿ=8000 ಹಾಗೂ ಉನ್ನತ ಶಿಕ್ಷಣ 10000 ರೂ.ಗಳನ್ನು ನೀಡಲಾಗುತ್ತಿದೆ.

ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ದೃಷ್ಟಿದೋಷವುಳ್ಳ ವಿಕಲಚೇತನ ವಿದ್ಯಾರ್ಥಿಗಳು ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಾಂಶದ ಉಪಯೋಗದಿಂದ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ (ಮಾತನಾಡುವ) ಟಾಕಿಂಗ್ ಲ್ಯಾಪ್‌ಟಾಪ್‌ನ್ನು ಒದಗಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ.

ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ನೀಡುವ ಯೋಜನೆ

ವಾರ್ಷಿಕ ವರಮಾನ ರೂ.2.00 ಲಕ್ಷಗಳಿಗಿಂತ ಕಡಿಮೆಯಿರುವ 20 ರಿಂದ 60 ವರ್ಷದೊಳಗಿನ ವಯೋಮಾನದ ತೀವ್ರತರನಾದ ದೈಹಿಕ ವಿಕಲಚೇತನರಿಗೆ ಜೀವಿತ ಕಾಲದಲ್ಲಿ ಒಂದು ಬಾರಿ ವಾಹನವನ್ನು ಒದಗಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಚಾಲಿತ 33

ಅಂಧ ವಿದ್ಯಾರ್ಥಿಗಳಿಗೆ ಬೈಲ್ ಕಿಟ್ ನೀಡುವ ಯೋಜನೆ

ಎಸ್.ಎಸ್.ಎಲ್.ಸಿ ನಂತರ ವ್ಯಾಸಂಗ ಮಾಡುತ್ತಿರುವ ದೃಷ್ಟಿದೋಷವುಳ್ಳ ವಿಕಲಚೇತನ ವಿದ್ಯಾರ್ಥಿಗಳು ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಾಂಶದ ಉಪಯೋಗದಿಂದ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಬೈಲ್ ಕಿಟ್ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.

ಸ್ವಯಂ ಉದ್ಯೋಗಕ್ಕಾಗಿ ಆಧಾರ ಯೋಜನೆ

ವಿಕಲಚೇನತರು ಸ್ವಯಂ ಉದ್ಯೋಗ ಕೈಗೊಂಡು ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸಲು ಅನುಕೂಲವಾಗುವಂತೆ ಆಧಾರ ಎಂಬ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಿದೆ. ಪ್ರತಿ ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ರೂ.1.00.000/- ಗರಿಷ್ಟ ಸಾಲ ಒದಗಿಸಲಾಗಿದೆ. ಇದರಲ್ಲಿ ರೂ.50,000/- ಸಹಾಯಧನ (ಸಬ್ಸಿಡಿ) ಇರುತ್ತದೆ.

ವಿಕಲಚೇತನ ವ್ಯಕ್ತಿಗಳನ್ನು ಸಾಮಾನ್ಯ ವ್ಯಕ್ತಿ ಮದುವೆಯಾದಲ್ಲಿ ಪ್ರೋತ್ಸಾಹಧನ ನೀಡುವ ಯೋಜನೆ.

ವಿಕಲಚೇತನ ಯುವಕ/ಯುವತಿಯರನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ರೂ. 50,000/- ಪ್ರೋತ್ಸಾಹ ಧನ ನೀಡಲಾಗುವುದು. ಸದರಿ ಹಣವನ್ನು ನಿರಂತರವಾಗಿ ಮಾಸಿಕ ಆದಾಯ ದೊರಕಿಸಲು ವಿಕಲಚೇತನರ ವ್ಯಕ್ತಿಯ ಹೆಸರಿನಲ್ಲಿ ರೂ.50,000/-ಗಳನ್ನು 5 ವರ್ಷಗಳ ಅವಧಿಗೆ ಠೇವಣಿ ಮಾಡಲಾಗವುದು.

ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಆರೈಕೆ ಭತ್ಯೆ:

ಬಡ ಕುಟುಂಬದ ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ, ಅವುಗಳ ಆರೈಕೆಗಾಗಿ, ಆಯಾ ಸೇವೆ. ಆರೋಗ್ಯ ಪಾಲನೆ, ಪೌಷ್ಟಿಕ ಆಹಾರ ಹಾಗೂ ಔಷಧೋಪಚಾರಗಳಿಗಾಗಿ 05 ವರ್ಷಗಳ ಅವಧಿಗೆ ಮಾಹೆಯಾನ ರೂ.2000/-ಗಳಂತೆ ಆರೈಕೆ ಭತ್ಯೆಯನ್ನು ನೀಡಲಾಗುವುದು. (2 ಮಕ್ಕಳಿಗೆ ಅವಕಾಶವಿದೆ).

ಅಂಗವಿಕಲ ಮಕ್ಕಳ ಶಿಶು ಕೇಂದ್ರಿಕೃತ ಯೋಜನೆ

ಈ ಯೋಜನೆಯಡಿ ಸರ್ವೋದಯ ಸರ್ವೀಸ್ ಸೋಸೈಟಿ ರವರ ವತಿಯಿಂದ ವಿಜಯಪುರ ದೇವನಹಳ್ಳಿನಲ್ಲಿ ಲೈಪ್ ಲೈಟ್ ಬುದ್ದಿಮಾಂದ್ಯ ಮಕ್ಕಳ ವಸತಿಯುತ ಶಾಲೆ ಹಾಗೂ ಧರಿತ್ರಿ ಟ್ರಸ್ಟ್ ರವರ ವತಿಯಿಂದ ನರಸೀಪುರ ಗ್ರಾಮ ನೆಲಮಂಗಲ ತಾಲ್ಲೂಕಿನಲ್ಲಿ ಬುದ್ದಿಮಾಂದ್ಯ ಮಕ್ಕಳಿಗಾಗಿ ವಿಶೇಷ ಶಾಲೆಯನ್ನು ತೆರೆಯಲಾಗಿದೆ. 06 ರಿಂದ 25 ವರ್ಷ ವಯೋಮಿತಿ ಒಳಗಿನ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಣಕ್ಕೆ ಅವಕಾಶವಿದೆ.

ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಯೋಜನೆ.

ವಿಕಲಚೇತನರನ್ನು ಗುರುತಿಸಿ ಅವರಿಗೆ ಶೈಕ್ಷಣಿಕ, ಉದ್ಯೋಗ ಮತ್ತು ತರಬೇತಿ, ವೈದ್ಯಕೀಯ ಹಾಗೂ ಸಾಮಾಜಿಕ ಪುನರ್ವಸತಿ ಸೇವೆಗಳನ್ನು ಅವರ ಮನೆ ಬಾಗಿಲಿನಲ್ಲಿಯೇ ಒದಗಿಸಿ ಅವರ ಸರ್ವಾಂಗೀಣ ಪುನರ್ವಸತಿಯನ್ನು ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯಡಿ ವಿಕಲಚೇತನರಿಗೆ ಅಗತ್ಯವಿರುವ ವೈದ್ಯಕೀಯ ಸೇವೆ, ವೃತ್ತಿ ಚಿಕಿತ್ಸೆ, ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ಕೇಂದ್ರಗಳಲ್ಲಿ ತಯಾರಿಸಿ ಒದಗಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪುನರ್ವಸತಿ ಕೇಂದ್ರವನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆ, ಹೆಬ್ಬಾಳ ದೊಡ್ಡಬಳ್ಳಾಪುರದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ರವರ ಮೂಲಕ ಅಂಗವಿಕಲ ಮಹಿಳಾ ಉದ್ಯೋಗಸ್ಥ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ

`ಗ್ರಾಮೀಣ ವಿಕಲಚೇತನ ಯುವತಿಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಪ್ರೋತ್ಸಾಹ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ವೋದಯ ಸರ್ವಿಸ್ ಸೋಸೈಟಿ ರವರ ವತಿಯಿಂದ ಇಲಾಖೆಯ ಅನುದಾನದಡಿ ಹೊಸಕೋಟೆ ಟೌನ್‌ನಲ್ಲಿ ಮಹಿಳಾ ವಸತಿ ನಿಲಯವನ್ನು ನಡೆಸಲಾಗುತ್ತಿದೆ.

ನಿರಾಮಯ ಆರೋಗ್ಯ ವಿಮಾ ಯೋಜನೆ

ಬುದ್ದಿಮಾಂದ್ಯ, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲತೆಗೆ ಒಳಗಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿಕಲಚೇತನರಿಗೆ “ನಿರಾಮಯ” ಆರೋಗ್ಯ ವಿಮಾ ಯೋಜನೆ ಜಾರಿಗೆ ತಂದಿದ್ದು, ಸದರಿ ಯೋಜನೆಯಡಿ ವಿಕಲಚೇತನ ವ್ಯಕ್ತಿಯೋರ್ವನಿಗೆ ವಾರ್ಷಿಕ ವಿಮಾಕಂತು ರೂ.250/-ಗಳನ್ನು ಸರ್ಕಾರವೇ ಭರಿಸುವುದು. ಸದರಿ ಫಲಾನುಭವಿಯು ರೂ.1.00ಲಕ್ಷಗಳ ವರೆಗೆ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿದೆ.

ಹಿರಿಯ ನಾಗರಿಕರಿಗೆ ಗುರುತಿನ ಚೀಟಿ:

60 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲಾ ಹಿರಿಯ ನಾಗರಿಕರಿಗೆ ಸೇವಾ ಸಿಂದು ಯೋಜನೆಯಡಿ ಆನ್ ಲೈನ್ ಮೂಲಕ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದೆ.

ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ-1090

ಹಿರಿಯ ನಾಗರಿಕರು ಕಿರುಕುಳ, ಹಣಕಾಸಿನ ಶೋಷಣೆ, ಮಾನಸಿಕ ತುಮುಲ ಮತ್ತು ದುರ್ಬಲರಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹ ಸಮಸ್ಯೆಗಳ ನಿವಾರಣೆಗಾಗಿ ಹಾಗೂ ತುರ್ತು ಸಹಾಯಕ್ಕಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರ ಕಛೇರಿಯ ಅವರಣದಲ್ಲಿ ನಡೆಸಲಾಗುತ್ತಿದೆ.

ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ;-14567

ಬೆಂಗಳೂರಿನಲ್ಲಿರುವ ಹಿರಿಯ ನಾಗರಿಕರ ಸೇವಾ ಕೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಸ್ವಯಂ ಸಂಸ್ಥೆಯ ಸಹಯೋಗದೊಂದಿಗೆ “ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ-14567” ಯನ್ನು ಪ್ರಾರಂಭಿಲಾಗಿದೆ.

ಈ ಸಹಾಯವಾಣಿಯ ಮೂಲಕ ಯೋಜನೆಗಳ ಬಗ್ಗೆ ಮಾಹಿತಿ. ಕಾಯ್ದೆಗಳ ಬಗ್ಗೆ ಅರಿವು, ಆರೋಗ್ಯ, ಕೌಟುಂಬಿಕ, ಆರ್ಥಿಕ ಹಾಗೂ ಕಾನೂನಾತ್ಮಕ ಸಮಸ್ಯೆಗಳನ್ನು ಹೊಂದಿರುವ ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಸಲಹೆ ಮಾರ್ಗದರ್ಶನ ನೀಡಲಾಗುತ್ತದೆ.

ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಹಗಲು ಯೋಗಕ್ಷೇಮ ಕೇಂದ್ರವನ್ನು ಗ್ರಾಮೀಣ ಅಭ್ಯುದಯ ಸಂಸ್ಥೆ ದೊಡ್ಡಬಳ್ಳಾಪುರ ಆವರಣದಲ್ಲಿ ತೆರೆಯಲಾಗಿದೆ. ಸದರಿ ಕೇಂದ್ರಲ್ಲಿ 50 ವೃದ್ಧರಿಗೆ ಅವಕಾಶ ಮಾಡಿದೆ. ಪ್ರತಿದಿನ ಬೆಳಿಗ್ಗೆ 9.00 ರಿಂದ ಸಂಜೆ 6.00 ವರೆಗೆ ವೃದ್ಧರು ಸದರಿ ಕೇಂದ್ರಕ್ಕೆ ಬಂದು ಕೇಂದ್ರದಲ್ಲಿನ ಚಟುವಟಿಕೆಗಳಾದ ಮನೋರಂಜನೆ, ಆರೋಗ್ಯ, ಕೌಶಲ್ಯ, ಇತರೆ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಮದ್ಯಾಹ್ನದ ಲಘು ಉಪಹಾರವನ್ನು ನೀಡಲಾಗುವುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...