ಕಳೆದ ಕೆಲವು ದಿನಗಳಿಂದ ಟೊಮ್ಯಾಟೋ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಕಂಗೆಟ್ಟಿದ್ದರು. ದಿನನಿತ್ಯದ ಅಡುಗೆಗೆ ಟೊಮ್ಯಾಟೋ ಅತ್ಯಗತ್ಯವಾಗಿದ್ದು, ಆದರೆ ಬೆಲೆ ಏರಿಕೆಯ ಕಾರಣಕ್ಕೆ ಇದರ ಬದಲಿಗೆ ಕೆಲವೊಬ್ಬರು ಹುಣಸೆ ಹಣ್ಣಿನ ಹುಳಿ ಬಳಸುತ್ತಿದ್ದರು.
ಅಲ್ಲದೆ ಮುಗಿಲು ಮುಟ್ಟಿದ ಟೊಮ್ಯಾಟೋ ದರದಿಂದಾಗಿ ಹೋಟೆಲ್ ತಿನಿಸುಗಳ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಇದು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿತ್ತು. ಇದೀಗ ಟೊಮೊಟೊ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ.
ಟೊಮ್ಯಾಟೋ ಬೆಲೆ ಈಗ ಮತ್ತೆ ಇಳಿಕೆಯ ಹಾದಿ ಹಿಡಿದಿದ್ದು, ಈ ಹಿಂದೆ ಕೆಜಿಗೆ 150 ರಿಂದ 170 ರೂಪಾಯಿಗಳಿಂದ ಈಗ 70 ರಿಂದ 80 ರೂಪಾಯಿಗಳಿಗೆ ಲಭ್ಯವಾಗುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಮಾಹಿತಿ ನೀಡಿದ್ದು, ಟೊಮ್ಯಾಟೋ ಬೆಲೆ ಇಳಿಕೆಯಾಗುತ್ತಿರುವುದು ಗೃಹಿಣಿಯರಲ್ಲಿ ಸಂತಸ ಮೂಡುವಂತೆ ಮಾಡಿದೆ.