ಮಿಲ್ಕ್ ಶೇಕ್ ಎಂದರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ಕುಡಿಯುತ್ತಾರೆ. ಅದರಲ್ಲಿ ಡ್ರೈಫ್ರೂಟ್ಸ್ ಇದ್ದರಂತೂ ಕೇಳುವುದೇ ಬೇಡ. ಬೇಸಿಗೆಯ ಬಿಸಿಗೆ ತಂಪಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿಕೊಂಡು ಕುಡಿದರೆ ದೇಹ ತಂಪಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ.
ಬೇಕಾಗುವ ಸಾಮಾಗ್ರಿಗಳು:
2 ಟೇಬಲ್ ಸ್ಪೂನ್-ಪಿಸ್ತಾ, 10-ಬಾದಾಮಿ, 10 ಗೋಡಂಬಿ, 2-ಒಣ ಅಂಜೂರ, 3-ಖರ್ಜೂರ, ¼ ಟೀ ಸ್ಪೂನ್-ಏಲಕ್ಕಿ ಪುಡಿ, 2 ಕಪ್-ಹಾಲು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ನಲ್ಲಿ ಪಿಸ್ತಾ, ಬಾದಾಮಿ, ಗೋಡಂಬಿ, ಅಂಜೂರವನ್ನು 45 ನಿಮಿಷಗಳ ಕಾಲ ನೆನೆಸಿಡಿ. ನಿಮಗೆ ತಣ್ಣಗಿನ ಮಿಲ್ಕ್ ಶೇಕ್ ಇಷ್ಟವಿದ್ದರೆ ಹಾಲನ್ನು ಫ್ರಿಡ್ಜ್ ನಲ್ಲಿಡಿ. ನೆನೆಸಿಟ್ಟ ಬಾದಾಮಿಯ ಸಿಪ್ಪೆಯನ್ನು ತೆಗೆದು ಉಳಿದ ಡ್ರೈಫ್ರೂಟ್ಸ್ ನೊಂದಿಗೆ ಒಂದು ಮಿಕ್ಸಿ ಜಾರಿಗೆ ಸೇರಿಸಿ ರುಬ್ಬಿಕೊಳ್ಳಿ.
ಹಾಗೇ ಖರ್ಜೂರ, ಏಲಕ್ಕಿ ಪುಡಿಯನ್ನು ಸೇರಿಸಿ. 1 ಕಪ್ ಹಾಲು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಉಳಿದ ಹಾಲನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಖರ್ಜೂರ ಹಾಕಿದ್ದರಿಂದ ಸಕ್ಕರೆಯ ಅವಶ್ಯಕತೆ ಇಲ್ಲ.