ನವೆಂಬರ್ ತಿಂಗಳಿನಿಂದ ಅಮೆರಿಕವು ಭಾರತ, ಚೀನಾ, ಬ್ರೆಜಿಲ್ ಸೇರಿದಂತೆ ಒಟ್ಟು 33 ದೇಶದ ಪ್ರಜೆಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ಮುಕ್ತಿ ನೀಡಲಿದೆ.
ಆದರೆ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದ ಪ್ರಯಾಣಿಕರು ಮಾತ್ರ ಅಮೆರಿಕಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.
18 ತಿಂಗಳುಗಳ ಹಿಂದೆ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ಹೇರಲಾಗಿದ್ದ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳನ್ನು ಜೋ ಬಿಡೆನ್ ಸರ್ಕಾರ ಸಡಿಲಗೊಳಿಸಿದೆ. ಕೋವಿಡ್ ಲಸಿಕೆಯನ್ನು ಪಡೆದ ಎಲ್ಲಾ ಪ್ರಯಾಣಿಕರಿಗೂ ಈ ಅಮೆರಿಕ ಪ್ರಯಾಣ ಸಾಧ್ಯವಾಗುವುದಿಲ್ಲ.
ಅಮೆರಿಕಕ್ಕೆ ಆಗಮಿಸುವ ವಿದೇಶಿ ಪ್ರಜೆಗಳು ಲಸಿಕೆ ಪ್ರಮಾಣ ಪತ್ರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಯಾವ ಲಸಿಕೆಗಳಿಗೆ ಅನುಮತಿ ನೀಡಬೇಕು ಎಂಬ ಅಂತಿಮ ನಿರ್ಧಾರವನ್ನು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಶನ್ ಕೈಗೊಳ್ಳಲಿದೆ ಎಂದು ಶ್ವೇತ ಭವನ ಈಗಾಗಲೇ ಮಾಹಿತಿ ನೀಡಿದೆ.
ಭಾರತೀಯ ಕೊರೊನಾ ಲಸಿಕೆಗಳ ಕತೆಯೇನು..?
ಭಾರತ್ ಬಯೋಟೆಕ್ನಿಂದ ನಿರ್ಮಿತವಾದ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಎಫ್ಡಿಎ ಅನುಮತಿ ನೀಡಿಲ್ಲ. ಅಮೆರಿಕದಲ್ಲಿ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿದ್ದ ಕೋವ್ಯಾಕ್ಸಿನ್ ಮನವಿಯನ್ನು ಎಫ್ಡಿಎ ತಿರಸ್ಕರಿಸಿತ್ತು. ಕೊವ್ಯಾಕ್ಸಿನ್ ಲಸಿಕೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಪ್ರಾಯೋಗಿಕ ಪರೀಕ್ಷೆಯ ಅಗತ್ಯವಿದೆ ಎಂದು ಎಫ್ಡಿಎ ಹೇಳಿತ್ತು.
ಹೀಗಾಗಿ ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಸ್ವೀಕರಿಸಿದವರಿಗೆ ಇದೀಗ ಅಮೆರಿಕ ಪ್ರಯಾಣ ತುಸು ಕಷ್ಟವೇ ಆಗಿರಲಿದೆ. ಕೊವ್ಯಾಕ್ಸಿನ್ ಲಸಿಕೆಯು ವಿದೇಶಿ ಅನುಮೋದನೆ ಪಡೆಯುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆಯಬೇಕು ಅಂದರೆ ಮೂರನೇ ಹಂತದ ಪ್ರಯೋಗದ ದಾಖಲೆಗಳನ್ನು ಸಲ್ಲಿಸಲೇಬೇಕು. ಆಗ ಮಾತ್ರ ಕೊವ್ಯಾಕ್ಸಿನ್ ಲಸಿಕೆಗೆ ವಿದೇಶಿ ಅನುಮೋದನೆ ಸಿಗಲಿದೆ.
ಇನ್ನು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತಯಾರಾಗುವ ಕೋವಿಶೀಲ್ಡ್ ಲಸಿಕೆಗೆ ಬ್ರಿಟನ್ ಹಾಗೂ ಯುರೋಪಿಯನ್ ಮೆಡಿಸಿನ್ ರೆಗ್ಯುಲೇಟರ್ನಿಂದ ಅನುಮೋದನೆ ದೊರಕಿದೆ. ಯುಎಸ್ ಎಫ್ಡಿಎ ಅನುಮೋದನೆ ಇನ್ನೂ ಬಾಕಿ ಇದೆ.