ಮೇಸ್ತ್ರಿಯೊಬ್ಬರ ಮಗಳಾಗಿ ಭಾರೀ ಅಸಮಾನತೆ ಹಾಗೂ ಬಡತನದ ಬೇಗೆಯನ್ನು ಕಂಡ ಯುವತಿಯೊಬ್ಬರು ಚಾರ್ಟರ್ಡ್ ಅಕೌಂಟೆಂಟ್ ಆಗಿ ಲಕ್ಷಾಂತರ ರೂಪಾಯಿಗಳ ಸಂಪಾದನೆಯನ್ನೂ ಕಂಡು ಇದೀಗ ಪೊಲೀಸ್ ಪೇದೆಯಾಗಿ ತಿಂಗಳಿಗೆ 13,000 ರೂ. ಸಂಬಳ ಬರುವ ಕೆಲಸ ಸೇರಿದ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ನಡೆದಿದೆ.
ಹೈದರಾಬಾದ್‌ನ ಮುಚಕಾರ್ಲ ಮಲ್ಲಿಕಾ ಇದಕ್ಕೆ ಸ್ಪಷ್ಟ ಉತ್ತರ ಹೊಂದಿದ್ದಾರೆ. “ನಮ್ಮಂತೆಯೇ ಕಷ್ಟಗಳನ್ನು ಎದುರಿಸದೇ ಇರಲಿ ಎಂದು ನಮ್ಮ ಜನರ ಸೇವೆ ಮಾಡಲು,” ಎಂದು ತಮ್ಮ ನಿಮಿತ್ತ ವಿವರಿಸಿದ್ದಾರೆ ಮಲ್ಲಿಕಾ.
ಜಲಜನಕದಿಂದ ಓಡುವ ಕಾರು ಖರೀದಿ ಮಾಡಿದ ನಿತಿನ್ ಗಡ್ಕರಿ
ಬಡತನದ ಬೇಗೆಯಲ್ಲಿ ಬೇಯುತ್ತಲೇ ತಮ್ಮ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪೂರೈಸಿದ ಮಲ್ಲಿಕಾ, ಸರ್ಟಿಫೈಯ್ಡ್ ಫೈನಾನ್ಷಿಯಲ್ ಪ್ಲಾರ್ (ಸಿಎಫ್‌ಪಿ) ಆಗಿ ಹೈದರಾಬಾದ್‌ನ ಆಡಿಟ್ ಸಂಸ್ಥೆಯೊಂದನ್ನು ಸೇರಿದ್ದರು. ಆದರೆ, ತನ್ನಂತೆ ನೊಂದ ಜನರ ನೆರವಿಗೆ ಬರಲು ತಾನು ಏನೂ ಮಾಡುತ್ತಿಲ್ಲ ಎನಿಸಿ, 2019ರಲ್ಲಿ ತಮ್ಮ ಹುದ್ದೆ ಬಿಟ್ಟಿದ್ದಾರೆ ಮಲ್ಲಿಕಾ.
“ದುಡ್ಡು ಮುಖ್ಯವಾದರೂ ಅದುವೇ ಜೀವನವಲ್ಲ. ನಾನು ನನ್ನ ಊರಿನ ಸೇವೆ ಮಾಡಬೇಕಿತ್ತು. ನನ್ನ ಬಾಲ್ಯದಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ಅನ್ಯರಿಗೆ ಹೀಗೆ ಆಗಬಾರದು. ಜನರಿಗೆ ನೆರವಾಗಲು ಪೊಲೀಸ್ ಕೆಲಸ ಉತ್ತಮವಿದೆ ಎಂದು ಅಂದುಕೊಂಡಿದ್ದೇನೆ,” ಎಂದು ಮಲ್ಲಿಕಾ ಹೇಳುತ್ತಾರೆ.
ಆದರೆ ಮಲ್ಲಿಕಾರ ಈ ನಿರ್ಧಾರದಿಂದ ಆಕೆಯ ಹೆತ್ತವರಿಗೆ ನಿರಾಶೆಯಾಗಿದೆ. “ಮೊದಲಿಗೆ ನಮಗೆ ಬೇಸರವಾಗಿತ್ತು. ಅಧ್ಯಯನ ಮುಗಿಸಿದ ಬಳಿಕ ಆಕೆ ಮಾಸಿಕ 40,000 ರೂ. ಸಂಪಾದನೆ ಮಾಡಲು ಆರಂಭಿಸಿದ್ದರು, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿತ್ತು. ಆದರೆ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಆಕೆಯ ನಿರ್ಧಾರವನ್ನು ನಾವೆಂದೂ ವಿರೋಧಿಸಿಲ್ಲ,” ಎಂದು ಮಲ್ಲಿಕಾರ ತಂದೆ ದಾಳಯ್ಯ ತಿಳಿಸಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಭಾಗಿಯಾದ ಮಲ್ಲಿಕಾ, ಇದೀಗ ಪೊಲೀಸ್ ಇಲಾಖೆಯಲ್ಲಿ ಪೇದೆಯ ತತ್ಸಮಾನ ಹುದ್ದೆಯೊಂದರಲ್ಲಿ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜನಗರಂ ಮಂಡಲದ ಚಕ್ರದ್ವಾರಬಂಧಂ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ.
ತಮಗೆ ಇದಕ್ಕಿಂತ ಹೆಚ್ಚಿನ ಸಂತಸ ಬೇರೆ ಕೆಲಸದಲ್ಲಿ ಸಿಕ್ಕಿಲ್ಲ ಎನ್ನುವ ಮಲ್ಲಿಕಾ, ತಮ್ಮೂರಿನಲ್ಲಿ 60ರಷ್ಟು ಕೇಸುಗಳನ್ನು ಇತ್ಯರ್ಥಪಡಿಸುವ ಮೂಲಕ ಹಿರಿಯರಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
“ಬಹಳ ಬದ್ಧತೆಯಿಂದ ಕೆಲಸ ಮಾಡುವ ಮಲ್ಲಿಕಾ ಬಹಳ ಪರಿಶ್ರಮ ಪಡುತ್ತಾರೆ. ಗ್ರಾಮ ಪೊಲೀಸ್ ಅಧಿಕಾರಿಗಳಿಗೆ ನೀಡಲಾದ ಹೊಣೆಯನ್ನು ಅವರು ತಮ್ಮ ಸಂಪೂರ್ಣ ಸಮಯವನ್ನು ಧಾರೆಯೆರೆದು ನಿಭಾಯಿಸುತ್ತಿದ್ದಾರೆ. ಆಕೆ ಗ್ರಾಮಸ್ಥರೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ,” ಎಂದು ರಾಜಮಹೇಂದ್ರವರಂ ಗ್ರಾಮೀಣ ಪೊಲೀಸ್‌ನ ಎಸ್‌ಐ ಐಶ್ವರ್ಯಾ ರಸ್ತೋಗಿ ತಿಳಿಸಿದ್ದಾರೆ.