20 ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಬುಲಂದರ್ಶಹರ್ ಜಿಲ್ಲೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಿಚಿತ್ರ ಘಟನೆಯು ಕಳೆದ ವಾರ ಸಂಭವಿಸಿತ್ತು. ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಐದನೇ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನ ಪಂಕಜ್, ಅಮಿತ್, ರಿಕ್ಕಿ ಹಾಗೂ ಅಭಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗೌತಮ ಬುದ್ಧ ನಗರ ಜಿಲ್ಲೆಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಪ್ರಕರಣ ಸಂಬಂಧ ಮಾತನಾಡಿದ ಹಿರಿಯ ಸೂಪರಿಟೆಂಡೆಂಟ್ ಸಂತೋಷ್ ಕುಮಾರ್ ಸಿಂಗ್, ಐವರು ಆರೋಪಿಗಳು ಕೋಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ದರಿಯಾಪುರ ಗ್ರಾಮದಲ್ಲಿರುವ ಮೃತ ವ್ಯಕ್ತಿಯ ಅಂಗಡಿಗೆ ಜುಲೈ 22ರ ಬೆಳಗ್ಗೆ 8:40 ಸುಮಾರಿಗೆ ಭೇಟಿ ನೀಡಿದ್ದರು. ಅಂಗಡಿಯಲ್ಲಿ ಸಿಗರೇಟ್ ಖರೀದಿ ಮಾಡಿದ್ದ ಆರೋಪಿಗಳು 20 ರೂಪಾಯಿ ವಿಚಾರಕ್ಕೆ ಜಗಳ ಆರಂಭಿಸಿದ್ದರು.
ಬಿಎಸ್ಎಫ್ನಲ್ಲಿ ಕೆಲಸ ಮಾಡುವ ನಿಸಾರ್ ಪುತ್ರ ಅಫ್ಸರ್ ಇವರ ಮೇಲೆ ಕೈ ಮಾಡಿದ್ದ. ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದ ಆರೋಪಿಗಳು ಮತ್ತಿಷ್ಟು ಜನರನ್ನ ಸೇರಿಸಿಕೊಂಡು ಅಂಗಡಿಗೆ ಮರಳಿದ್ದರು. ನಿಸಾರ್ರ ಅಂಗಡಿಯನ್ನು ಧ್ವಂಸ ಮಾಡಿದ್ದರು ಮಾತ್ರವಲ್ಲದೇ ಅಫ್ಸರ್ ಹಾಗೂ ನಿಸಾರ್ ಮೇಲೆ ಫೈರಿಂಗ್ ನಡೆಸಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿಸಾರ್ ದೆಹಲಿಯ ಏಮ್ಸ್ನಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.