ವಿಮಾನ ಹತ್ತುವ ಗಡಿಬಿಡಿಯಲ್ಲಿ ಪ್ರಯಾಣಿಕರೊಬ್ಬರು ಕ್ಯಾಬ್ ಚಾಲಕನಿಗೆ ಹಣ ನೀಡುವುದನ್ನು ಮರೆತಾಗ ಕ್ಯಾಬ್ ಚಾಲಕ ವರ್ತಿಸಿದ ರೀತಿಗೆ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕ್ಯಾಬ್ ಚಾಲಕನ ಪ್ರಾಮಾಣಿಕತೆಯ ಕುರಿತು ಗೂಗಲ್ ಮತ್ತು ಟ್ವಿಟರ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪರ್ಮಿಂದರ್ ಸಿಂಗ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ಅದೀಗ ಭಾರಿ ವೈರಲ್ ಆಗಿದೆ. ಕ್ಯಾಬ್ನಲ್ಲಿ ಪ್ರಯಾಣಿಸಿದ ತಾನು ಹಣವನ್ನು ನೀಡಲು ಮರೆತುಹೋದೆ. ನಂತರ ನಾನು ಕರೆ ಮಾಡಿದಾಗ ಕ್ಯಾಬ್ ಚಾಲಕ ಪರವಾಗಿಲ್ಲ, ಇನ್ನೊಮ್ಮೆ ನೀಡಿ ಎಂದ. ನಾನು ಭಾರತೀಯ ಪ್ರಜೆ ಅಲ್ಲ ಎಂದು ತಿಳಿದಿದ್ದರೂ ಕ್ಯಾಬ್ ಚಾಲಕ ಈ ರೀತಿ ವರ್ತಿಸಿದ್ದುದು ಬಹಳ ಕುತೂಹಲವಾಯಿತು ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ನಂತರ ಆತನ ವಿವರ ಪಡೆದು ಹಣವನ್ನು ನೀಡಲಾಯಿತು. ಆದರೆ ಇಂಥವರೂ ಈಗ ಸಿಗುತ್ತಾರೆ ಎಂದು ತಿಳಿಯುವುದೇ ಕಷ್ಟ. ಇಂದಿನ ಕಾಲದಲ್ಲಿ ಎಲ್ಲವೂ ಹಣದಿಂದಲೇ ನಡೆಯುವಾಗ ಇಷ್ಟು ಮೃದು ಮಾತಿನಲ್ಲಿ ಚಾಲಕ ವರ್ತಿಸಿದ್ದುದು ಅಚ್ಚರಿ ತರುವಂಥದ್ದು ಎಂದು ಅವರು ಬರೆದುಕೊಂಡಿದ್ದಾರೆ. ಈ ಕ್ಯಾಬ್ ಚಾಲಕನಿಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.