ಇದು ಬರೋಬ್ಬರಿ 40 ವರ್ಷಗಳ ಹಿಂದಿನ ದುರಂತ ಪ್ರೇಮಕಥೆ. ಹದಿಹರೆಯದ ವಯಸ್ಸಿನಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗಳು ಅಂತರ್ ಜನಾಂಗೀಯವಾದ ಕಾರಣ, ಇವರ ಪ್ರೀತಿಗೆ ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಇದೀಗ ಇಳಿ ವಯಸ್ಸಿನಲ್ಲಿ ಮತ್ತೆ ಒಂದಾಗಿದ್ದು, ಪ್ರೀತಿ ಅಮರ ಎಂಬ ಸಂದೇಶ ಸಾರಿದ್ದಾರೆ.
ಹೌದು, ಅಂತರ್ ಜನಾಂಗೀಯ ಜೋಡಿಯು 40 ವರ್ಷಗಳ ನಂತರ ಮತ್ತೆ ಒಂದಾಗಿರುವಂತಹ ಹೃದಯಸ್ಪರ್ಶಿ ಘಟನೆ ನಡೆದಿದೆ. ಹದಿಹರೆಯದವರಾಗಿದ್ದಾಗ ಅವರು ಬೇರೆ ಬೇರೆ ಜನಾಂಗಗಳಿಗೆ ಸೇರಿದ ಕಾರಣ ತಮ್ಮ ಪ್ರತ್ಯೇಕ ದಾರಿಯಲ್ಲಿ ಹೋಗಲು ಬಲವಂತಪಡಿಸಿದ ದಂಪತಿಗಳನ್ನು ವಿಧಿ ಮತ್ತು ಸಾಮಾಜಿಕ ಮಾಧ್ಯಮಗಳು ಸಹಜವಾಗಿ ಒಟ್ಟಿಗೆ ಸೇರಿಸಿದೆ.
ಯುಕೆ ನಿವಾಸಿಯಾಗಿರುವ ಇದೀಗ 60 ವರ್ಷವಾಗಿರುವ ಪೆನ್ನಿ ಉಂಬರ್ಸ್ ಮತ್ತು ಮಾರ್ಕ್ ಬೆಥೆಲ್ ಎಂಬುವವರು ಭೇಟಿಯಾದ ಕೆಲವು ದಿನಗಳ ನಂತರ (ಸುಮಾರು 40 ವರ್ಷಗಳ ಹಿಂದೆ) ಬೇರ್ಪಡಬೇಕಾಯಿತು. ಇದೀಗ ಇವರು ಫೇಸ್‌ಬುಕ್‌ನಲ್ಲಿ ಪರಸ್ಪರ ಮಾತನಾಡಿದ ನಂತರ ಒಟ್ಟಿಗೆ ಜೀವನವನ್ನು ಹಂಚಿಕೊಳ್ಳುತ್ತಿದ್ದಾರೆ.
1970 ರ ದಶಕದಲ್ಲಿ 16 ವರ್ಷದ ಪೆನ್ನಿ ಉಂಬರ್ಸ್, ಬೆಥೆಲ್ ಅವರನ್ನು ಭೇಟಿಯಾಗಿದ್ದರು. ಇಬ್ಬರೂ ಲಂಡನ್‌ನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದರು. ಆದರೆ, ಪೆನ್ನಿ ಉಂಬರ್ಸ್ ಅವರ ತಂದೆ ಬೆಥೆಲ್ ಅನ್ನು ಭೇಟಿಯಾದಾಗ ಪೆನ್ನಿಯೊಂದಿಗೆ ಅವರ ಪ್ರಣಯ ಸಂಬಂಧವನ್ನು ಮುಂದುವರೆಸಿದರೆ ವಿದ್ಯಾರ್ಥಿವೇತನವನ್ನು ಹಿಂಪಡೆಯುವ ಬಗ್ಗೆ ಬೆದರಿಕೆಯೊಡ್ಡಿದ್ದರು.
ಇನ್ನು ಬೆಥೆಲ್‌ನ ಕುಟುಂಬವೂ ಬಿಳಿ ಹುಡುಗಿಯೊಂದಿಗೆ ಡೇಟಿಂಗ್ ಮಾಡುವುದನ್ನು ವಿರೋಧಿಸಿತ್ತು. ಮತ್ತು ಎಲ್ಲಾ ಕಡೆಯಿಂದ ಒತ್ತಡ ಎದುರಾದಾಗ, ಬೆಥೆಲ್ ಅವರು ‘ನನ್ನ ಜೀವನದ ಕಠಿಣ ನಿರ್ಧಾರ’ ಎಂದು ಹೇಳಿದ್ದರು. ಬೆಥೆಲ್ ಜೊತೆಗಿನ ಸಂಬಂಧವನ್ನು ಮುರಿಯಲು ಬಲವಂತಪಡಿಸಿದ ನಂತರ, ಉಂಬರ್ಸ್ ಕಾಲೇಜು ತೊರೆದಿದ್ದರು. ನಂತರ ಬೇರೆ ಮದುವೆಯಾದರೂ, ಡಿವೋರ್ಸ್ ಪಡೆದಿದ್ದರು.
ಪ್ರಯಾಣ ಮತ್ತು ಪ್ರವಾಸೋದ್ಯಮ ನಿರ್ವಹಣೆಯನ್ನು ಅಧ್ಯಯನ ಮಾಡಿದ ಬೆಥೆಲ್ ಅವರು ಪ್ರಪಂಚದಾದ್ಯಂತ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ.
ಇದೀಗ ಸುಮಾರು 40 ವರ್ಷಗಳ ನಂತರ ಈ ಜೋಡಿಯು ಅದೃಷ್ಟದಿಂದ ಮತ್ತೆ ಒಂದಾಗಿದ್ದಾರೆ. 2019 ರ ಅಂತ್ಯದ ವೇಳೆಗೆ, ಬೆಥೆಲ್ ಅವರು ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಅನ್ನು ಗಮನಿಸಿ, “ಇದು ಪೆನ್ನಿಯೇ?” ಎಂದು ಸಂದೇಶ ಕಳುಹಿಸಿದ್ದಾರೆ.
ಇನ್ನು ಈ ಜೋಡಿ ಮತ್ತೆ ಜೊತೆಯಾಗಬೇಕು ಅಂದಾಗ ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ ಇನ್ನೂ 18 ತಿಂಗಳು ಕಾಯಬೇಕಾಯಿತು. ಆದರೆ, ಈಗ 2021ರ ಜೂನ್‌ನಲ್ಲಿ, ಪೆನ್ನಿ ತನ್ನ ದೀರ್ಘಕಾಲದ ಪ್ರೇಮವನ್ನು ಪಡೆಯಲು ಬಹಾಮಾಸ್‌ನ ನ್ಯೂ ಪ್ರಾವಿಡೆನ್ಸ್ ದ್ವೀಪಕ್ಕೆ ಹಾರಿದ್ದಾರೆ.
ಇದೀಗ ಈ ಜೋಡಿಯು ತಮ್ಮ 40 ವರ್ಷಗಳ ದುರಂತ ಮತ್ತು ಸಂತೋಷದ ಪ್ರೇಮಕಥೆಯ ಪುಸ್ತಕವನ್ನು ಬರೆದಿದ್ದಾರೆ ಮತ್ತು ಅದಕ್ಕೆ ‘ಥರ್ಟಿ ನೈನ್ ಯೀಯರ್ಸ್ ಇನ್ ದ ವೈಲ್ಡರ್ನೆಸ್’ ಎಂದು ಹೆಸರಿಟ್ಟಿದ್ದಾರೆ.
“ನಾವು ಕಳೆದುಹೋದ 39 ವರ್ಷಗಳನ್ನು ಮತ್ತೆ ಪಡೆದಿದ್ದೇವೆ. ಆದರೆ, ನಾವು ನಿಜವಾಗಿಯೂ ಉತ್ತಮ ಭವಿಷ್ಯಕ್ಕಾಗಿ ಎದುರು ನೋಡುತ್ತಿದ್ದೇವೆ” ಎಂದು ಬೆಥೆಲ್ ಹೇಳಿದ್ದಾರೆ.