ಬೆಂಗಳೂರು : ಕರ್ನಾಟಕಕ ಪರೀಕ್ಷಾ ಪ್ರಾಧಿಕಾರವು, ಪಿಜಿಇಟಿ 2023ರ (PGET) ಡ್ಯಾಕ್ಯುಮೆಂಟ್ ಪರಿಶೀಲನೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಬಯಸಿರುವ ನೀಟ್ ರ್ಯಾಂಕಿಂಗ್ ಪಡೆದ ಅಭ್ಯರ್ಥಿಗಳಿಗೆ ಆಗಸ್ಟ್ 4ರಿಂದ 11ರ ವರೆಗೆ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ನಿಗದಿತ ದಿನಗಳಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.15ರವರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಯಾವ ಯಾವ ದಿನದಂದು ದಾಖಲಾತಿ ಪರಿಶೀಲನೆ ನಡೆಯಲಿದೆ ಎಂಬುದನ್ನು ಪ್ರಾಧಿಕಾರದ ವೆಬ್ಸೈಟ್ ಗೆ https://cetonline.karnataka.gov.in/kea/ ಭೇಟಿ ನೀಡಿ ವೀಕ್ಷಿಸಬಹುದಾಗಿದೆ. ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು, ಅರ್ಜಿ ಶುಲ್ಕವನ್ನು ಪಾವತಿಸಿದ ಅಭ್ಯರ್ಥಿಗಳು ಮಾತ್ರ ದಾಖಲೆಗಳ ಪರಿಶೀಲನೆಗೆ ಅರ್ಹತೆಯನ್ನು ಪಡೆದಿರುತ್ತಾರೆ ಎಂದು ಕೆಇಎ ಸೂಚಿಸಿದೆ. ಅಭ್ಯರ್ಥಿಗಳು ಲ್ಯಾಮಿನೇಟೆಡ್ ಮಾಡಿದ ಅಂಕಪಟ್ಟಿಗಳನ್ನು , ಪ್ರಮಾಣ ಪತ್ರಗಳನ್ನು ದಾಖಲೆಗಳ ಪರಿಶೀಲನೆಗೆ ಸಲ್ಲಿಸಬಾರದು. ಲ್ಯಾಮಿನೇಟೆಡ್ ಮಾಡಿದ ಅಂಕಪಟ್ಟಿಗಳನ್ನು / ಪ್ರಮಾಣ ಪತ್ರಗಳನ್ನು ಪ್ರಾಧಿಕಾರವು ಪರಿಶೀಲಿಸುವುದಿಲ್ಲ ಎಂದು ತಿಳಿಸಿದೆ.
ಅಭ್ಯರ್ಥಿಗಳು ಮಲ್ಲೇಶ್ವರಂನಲ್ಲಿರುವ ಪ್ರಾಧಿಕಾರದ ಕೇಂದ್ರ ಕಚೇರಿಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.