ಚಾಲನಾ ಪರವಾನಗಿ ಪಡೆಯುವುದು ಇನ್ಮುಂದೆ ಮತ್ತಷ್ಟು ಕಠಿಣವಾಗಲಿದೆ. ಚಾಲನಾ ಪರವಾನಗಿ ಪಡೆಯಲು ಒಂದು ತಿಂಗಳ ಮೊದಲೇ ಸಿದ್ಧತೆ ನಡೆಸಬೇಕಾಗುತ್ತದೆ. ಚಾಲನಾ ಪರವಾನಗಿ ಅಗತ್ಯವಿರುವವರು ಒಂದು ತಿಂಗಳ ಮುಂಚಿತವಾಗಿ ವಿಡಿಯೊ ಟ್ಯುಟೋರಿಯಲ್ ನೋಡಬೇಕು. ಸುರಕ್ಷಿತ ಚಾಲನೆ ಬಗ್ಗೆ ಆಳವಾಗಿ ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಚಾಲನಾ ಪರವಾನಗಿ ಪಡೆಯುವ ಪರೀಕ್ಷೆ ನೀಡಲು ಸಾಧ್ಯವಾಗಲಿದೆ.
ವರದಿಯ ಪ್ರಕಾರ, ಹೊಸ ಚಾಲನಾ ಪರವಾನಗಿ ಪಡೆಯಲು ಹೋಗುವ ಜನರಿಗೆ ಅಸುರಕ್ಷಿತ ಚಾಲನೆಯಿಂದ ತೊಂದರೆಗೊಳಗಾದ ಕುಟುಂಬಗಳ ಸದಸ್ಯರ ಸಂದರ್ಶನವನ್ನು ವಿಡಿಯೊ ಟ್ಯುಟೋರಿಯಲ್ ನಲ್ಲಿ ತೋರಿಸಲಾಗುವುದು. ಇದು ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.
ಇಷ್ಟೇ ಅಲ್ಲ,ಈಗಾಗಲೇ ಚಾಲನಾ ಪರವಾನಗಿ ಹೊಂದಿರುವವರು ಸುರಕ್ಷತೆ ನಿಯಮಗಳನ್ನು ಮುರಿದರೆ ಅವರು ಚಾಲನಾ ಸುರಕ್ಷತಾ ಪ್ರಮಾಣ ಪತ್ರ ಕೋರ್ಸ್ ಮುಗಿಸಬೇಕು. ಇದು ಮೂರು ತಿಂಗಳಿನ ಕೋರ್ಸ್ ಆಗಿರುತ್ತದೆ. ಡಿಎಲ್ ಗೆ ಆಧಾರ್ ಲಿಂಕ್ ಮಾಡಲಾಗುತ್ತದೆ. ಇದ್ರಿಂದ ಕೋರ್ಸ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಹೊಸ ನಿಯಮ ಜಾರಿಗೆ ತರಲು ಅಕ್ಟೋಬರ್ 31ರವರೆಗೆ ಅವಕಾಶ ನೀಡಲಾಗಿದೆ. ಶೀಘ್ರದಲ್ಲಿಯೇ ಈ ನಿಯಮಗಳು ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಸೇರಲಿವೆ. ಈ ವಿಡಿಯೊ ರಾಜ್ಯಗಳು ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಇರಲಿದೆ.