ಈಗ ಮದುವೆಗೂ ಮುನ್ನ ಮದುವೆಯಾಗುವ ಜೋಡಿ ಶೂಟಿಂಗ್ (ಪ್ರೀ ವೆಡ್ಡಿಂಗ್ ಶೂಟ್) ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ.
ಎಲ್ಲರಕ್ಕಿಂತ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುವ ಉದ್ದೇಶದಿಂದ ಅತ್ಯಂತ ಅಪಾಯಕಾರಿ ಶೂಟಿಂಗ್ಗೆ ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಆದರೆ ಇಲ್ಲಿ ವೈರಲ್ ಆಗಿರುವ ವಿಡಿಯೋ ಒಂದರ ಶೂಟಿಂಗ್ ಅಂತೂ ನೀವು ಜೀವಮಾನದಲ್ಲಿಯೇ ನೋಡಿರಲಿಕ್ಕಿಲ್ಲ.
13 ಸೆಕೆಂಡುಗಳ ಈ ವಿಡಿಯೋದಲ್ಲಿ ಭಾವಿ ದಂಪತಿ ಹುಚ್ಚು ಸಾಹಸ ಮಾಡಿದ್ದಾರೆ. ಮೋಟಾರು ಸೈಕಲ್ನಲ್ಲಿ ವಧು ಮತ್ತು ವರ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಅವರು ಬೈಕ್ನಲ್ಲಿ ಕುಳಿತುಕೊಂಡಿದ್ದಾರೆ. ಎದುರಿಗೆ ಒಂದು ಕಾರಿದೆ. ಇವರ ಬೈಕ್ ಅನ್ನು ಹಗ್ಗದಿಂದ ಕಟ್ಟಿರುವುದನ್ನು ನೋಡಬಹುದು. ಇದೇಕೆ ಹಗ್ಗ ಎನ್ನುವಷ್ಟರಲ್ಲಿಯೇ ಬೈಕ್ ಮೇಲಿದ್ದ ಈ ಜೋಡಿ ಬೈಕ್ ಸಹಿತ ಮೇಲೆ ಹಾರುತ್ತಾರೆ.
ಹೀಗೆ ಅವರು ಹಾರಿದ್ದು ಎದುರಿಗೆ ಇದ್ದ ಕಾರಿನ ಮೇಲೆ. ಬೈಕ್ ಬ್ಯಾಲೆನ್ಸ್ ಮಾಡಲು ಮುಂದೆ ಕೂಡ ಹಗ್ಗ ಕಟ್ಟಿರುವುದು ಕಂಡುಬರುತ್ತದೆ. ಕಾರಿನ ಮೇಲಿನಿಂದ ಸಿನಿಮಾದಲ್ಲಿ ಸ್ಟಂಟ್ ಮಾಡುವಂತೆ ಈ ಬೈಕ್ ಹಾರಿ ಕಾರನ್ನು ದಾಟಿ ಅತ್ತ ಹೋಗುತ್ತದೆ. ಆ ಮೇಲೆ ಅಲ್ಲೊಂದು ಕ್ರೇನ್ ಕಾಣಿಸುತ್ತದೆ. ಆ ಕ್ರೇನ್ ಗೆ ಕಟ್ಟಿದ ಹಗ್ಗದ ಸಹಾಯದಿಂದ ಈ ಜೋಡಿಯನ್ನು ಹಾರಿಸಲು ಅನುವು ಮಾಡಿಕೊಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು.