ಫ್ಲಾರಿಡಾದ ಡೇಟೋನಾ ಬೀಚ್‌ನ ನಿವಾಸಿಯೊಬ್ಬರು ಮನೆ ಮುಂದೆ ಏನೋ ಸದ್ದು ಕೇಳಿಸುತ್ತಲೇ ಬಾಗಿಲು ತೆರೆದು ನೋಡುತ್ತಿದ್ದಂತೆಯೇ ಮೊಸಳೆಯೊಂದರ ಕಡಿತಕ್ಕೆ ಒಳಗಾಗಿದ್ದಾರೆ.
ಸ್ಕಾಟ್ ಹೊಲ್ಲಿಂಗ್ಸ್‌ವರ್ಥ್ ಎಂದು ಗುರುತಿಸಲಾದ ಈ ವ್ಯಕ್ತಿ ತನ್ನ ಮಡದಿಯೊಂದಿಗೆ ಬಿಡುವಿನ ಸಮಯದಲ್ಲಿ ಖುಷಿಯಾಗಿದ್ದ ವೇಳೆ ಯಾರೋ ಬಂದು ಬಾಗಿಲು ತಟ್ಟಿದಂತಾಗಿದೆ. ಯಾರೆಂದು ನೋಡಲು ಹೋದ ಸ್ಕಾಟ್‌ಗೆ ತನ್ನ ಮನೆಗೆ ಬಂದಿರುವುದು ಮಾನವ ಅತಿಥಿಯಲ್ಲ ಬದಲಿಗೆ ಮೊಸಳೆ ಎಂದು ಅರಿವಾಗಿ ಬೆಚ್ಚಿಬಿದ್ದಿದ್ದಲ್ಲದೇ, ಅವರ ಮೇಲೆ ಮೊಸಳೆ ದಾಳಿ ಮಾಡಲು ಮುಂದಾಗಿದೆ.
ಮಾರ್ಚ್ 5ರ ರಾತ್ರಿ ಈ ಘಟನೆ ಜರುಗಿದ್ದು, ಸ್ಕಾಟ್‌ಗೆ ಮೇಲ್ತೊಡೆಯಲ್ಲಿ ಮೊಸಳೆ ದಾಳಿಯ ಗಾಯಗಳಾಗಿವೆ. ಈ ಗಾಯಗಳಿಂದ ಸ್ಕಾಟ್ ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಒಂಬತ್ತು ಅಡಿ ಉದ್ದವಿದ್ದ ಮೊಸಳೆಯನ್ನು ಫ್ಲಾರಿಡಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಸಮಿತಿಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಅಂದ ಹಾಗೆ ಫ್ಲಾರಿಡಾದಲ್ಲಿ 13 ಲಕ್ಷಕ್ಕೂ ಹೆಚ್ಚು ಮೊಸಳೆಗಳಿವೆ.