ಕೋವಿಡ್ ಸೋಂಕಿನಿಂದ ಉಂಟಾಗಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಅಂತಾರಾಷ್ಟ್ರೀಯ ಪ್ರಯಾಣ. ಪ್ರತಿ ದೇಶವೂ ಸಹ ತನ್ನಲ್ಲಿಗೆ ಪ್ರವೇಶಿಸಲು ಪ್ರಯಾಣಿಕರು ನೆಗೆಟಿವ್ ಆರ್‌ಟಿ ಪಿಸಿಆರ್ ಪರೀಕ್ಷಾ ವರದಿ ತೋರುವುದು ಕಡ್ಡಾಯಗೊಳಿಸಿದ್ದರೆ ಇನ್ನಷ್ಟು ದೇಶಗಳು ಕೆಲವೊಂದು ದೇಶಗಳಿಂದ ತಮ್ಮಲ್ಲಿಗೆ ಬರುವ ವಿಮಾನಗಳನ್ನೇ ರದ್ದು ಮಾಡಿವೆ.
ಭಾರತದಿಂತ ಬರುವ ವಿಮಾನಗಳನ್ನು ರದ್ದು ಮಾಡಿರುವ ದೇಶಗಳಲ್ಲಿ ಒಂದು ಕೆನಡಾ. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಭಾರತದಿಂದ ಬಹಳಷ್ಟು ಮಂದಿ ಕೆನಡಾಗೆ ಈ ಸಂದರ್ಭದಲ್ಲಿ ಹೋಗುವಾಗ ಬಹಳಷ್ಟು ಅಡೆತಡೆಗಳನ್ನು ಮೀರಿ ಹೋಗಬೇಕು.
ಕೋಲ್ಕತ್ತಾದಿಂದ ಐವರು ವಿದ್ಯಾರ್ಥಿಗಳ ಸಮೂಹವೊಂದು ಕೆನಡಾದ ವಿವಿಯೊಂದಕ್ಕೆ ತಮ್ಮ ಶಿಕ್ಷಣ ಮುಂದುವರೆಸಲು ಹೋಗಬೇಕಾಗಿ ಬಂದ ವೇಳೆ 70 ಗಂಟೆಗಳ ಸುದೀರ್ಘಾವಧಿಯ ಪ್ರಯಾಣ ಮಾಡಬೇಕಾಗಿ ಬಂದಿದೆ. ಇಷ್ಟೇ ಅಲ್ಲದೇ 65,000 ರೂಪಾಯಿಯಲ್ಲಿ ಮುಗಿಯಬೇಕಿದ್ದ ಈ ಪ್ರಯಾಣಕ್ಕೆ ಮೂರು ಲಕ್ಷ ರೂಪಾಯಿಗಳವರೆಗೂ ತಗುಲಿದೆ.
ಕೊರೊನಾ ವೈರಸ್ ಕೊಲ್ಲುವ ಇಲೆಕ್ಟ್ರಾನಿಕ್ ಮಾಸ್ಕ್ ಕಂಡುಹಿಡಿದ ಕೊಲ್ಕತ್ತಾ ವಿದ್ಯಾರ್ಥಿಗಳು
ತಾನ್ಯಾ ಎಂ ಪರೇಖ್ ಅಹಾನಾ ಜೈನ್, ಅಚಿಂತ್ ಸಿಂಗ್, ಸಿಯಾ ದುಗರ್ ಹಾಗೂ ಅವ್ನಿಶ್ ಪಸರಿ ಹೆಸರಿನ ಈ ವಿದ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆ 10:25ಕ್ಕೆ ರಾಜಧಾನಿ ದೆಹಲಿಗೆ ಹೊರಟು ಅಲ್ಲಿಂದ ಕನೆಕ್ಟಿಂಗ್ ವಿಮಾನ ಹಿಡಿದು ರಷ್ಯಾದ ಮಾಸ್ಕೋಗೆ ಅದೇ ರಾತ್ರಿ 11:15ಕ್ಕೆ ಹೊರಟು, ಬುಧವಾರ ಬೆಳಗ್ಗಿನ ಜಾವ 3:15ಕ್ಕೆ ತಲುಪಿದ್ದಾರೆ. ಇಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿದ ಕೂಡಲೇ ಮಾಸ್ಕೋದಲ್ಲಿ ಹೊಟೇಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ.
ಮಾಸ್ಕೋದಲ್ಲಿ 24 ಗಂಟೆಗಳ ಕಾಲ ತಂಗಿದ ಬಳಿಕ, ಅಲ್ಲಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತೆರಳಿದ್ದಾರೆ. ರಷ್ಯಾದ ಕಾಲಮಾನ ಬೆಳಿಗ್ಗೆ 6:05ಕ್ಕೆ ಮಾಸ್ಕೋದಿಂದ ಹೊರಟ ಈ ವಿಮಾನ ಫ್ರಾಂಕ್‌ಫರ್ಟ್‌ಗೆ ಬೆಳಿಗ್ಗೆ 08:30ಕ್ಕೆ ತಲುಪಿದ್ದಾರೆ.
ಫ್ರಾಂಕ್‌ಫರ್ಟ್‌ನಲ್ಲಿ ಏಳೂವರೆ ಗಂಟೆಗಳ ಲೇಔವರ್ ಬಳಿಕ ಟೊರೊಂಟೋಗೆ ಹೊರಟ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ 4 ಗಂಟೆಗೆ ಅಲ್ಲಿಗೆ ತಲುಪಿದ್ದಾರೆ. ಆ ವೇಳೆಗೆ ಭಾರತದಲ್ಲಿ ಶುಕ್ರವಾರ ಬೆಳಗ್ಗಿನ ಜಾವ 3:45ಕ್ಕೆ ಕೆನಡಾದಲ್ಲಿ ಲ್ಯಾಂಡ್ ಆಗಿದ್ದಾರೆ.