ಸಾಮಾನ್ಯವಾಗಿ ಈಗಿನ ಕಾಲದ ಹೆಣ್ಣುಮಕ್ಕಳಿಗೆ ಅಡುಗೆ ಮನೆ ಸ್ವಲ್ಪ ದೂರವೇ ಆಗಿದೆ. ಅವರಿಗೆ ಗಂಟೆಗಟ್ಟಲೇ ಅಡುಗೆ ಕೋಣೆಯಲ್ಲಿ ಕಳೆಯುವುದು ಇಷ್ಟವಿಲ್ಲ. ಅಲ್ಲದೇ, ಅಡುಗೆ ಕೋಣೆಗೆ ಮಾತ್ರವೇ ತಮ್ಮನ್ನು ಸೀಮಿತ ಮಾಡಲಾಗುತ್ತದೆ ಎನ್ನುವ ಆತಂಕವು ಅವರಲ್ಲಿದೆ. ಅದು, ಅವರು ಬಾಲ್ಯದಿಂದ ಕಂಡಿರುವ ವಾಸ್ತವ ಪ್ರಕರಣಗಳ ಅನುಭವ ಕೂಡ ಹೌದು.
ಅಮ್ಮ, ಅಜ್ಜಿ, ಚಿಕ್ಕಮ್ಮ, ಅತ್ತೆಯಂದಿರು ಬಹಳ ಕಲೆಗಳಲ್ಲಿ ನಿಪುಣರಾಗಿದ್ದರೂ ಕೌಟುಂಬಿಕ ವ್ಯವಸ್ಥೆ ನೆಪದಲ್ಲಿ ಅವರನ್ನು ಕೇವಲ ಅಡುಗೆ ಕೋಣೆಗೆ ಸೀಮಿತ ಮಾಡಲಾಯಿತು ಎನ್ನುವುದು ಹೆಣ್ಣುಮಕ್ಕಳ ವಾದ. ಹಲವು ಸಂದರ್ಭಗಳಲ್ಲಿ ಅದನ್ನು ಸಮಾಜ ಒಪ್ಪಿಕೊಳ್ಳಲೇಬೇಕು.
ಅದೇ ರೀತಿಯಲ್ಲಿ ಹಿಂದಿನವರು ತಮ್ಮ ಮನೆಯ, ತಮ್ಮ ಪ್ರಾಂತ್ಯದ, ವಿಶಿಷ್ಟ ಅಡುಗೆ ತಿನಿಸುಗಳನ್ನು ಆಗಾಗ್ಗೆ ತಯಾರಿಸುತ್ತಲೇ ಅದರ ಸಂರಕ್ಷಕರೂ ಆಗಿದ್ದರು. ಉದಾಹರಣೆಗೆ, ಅಯ್ಯಂಗಾರ್ ಪುಳಿಯೊಗರೆ, ಹೂರ್ಣದ ಹೋಳಿಗೆ, ಉಪ್ಪು ಸಾರು, ಮೊಳಕೆ ಕಾಳಿನ ಬೇಳೆ ಕಟ್ಟಿದ ಸಾರು, ಉಂಡೆ ಹುಳಿ, ಕುಚ್ಚುಂಡೆ, ಸೀಮೆ ಅವಲಕ್ಕಿ ಒಗ್ಗರಣೆಯಂಥ ತಿಂಡಿ ಹಾಗೂ ಅಡುಗೆಯ ಖಾದ್ಯಗಳು ನಮ್ಮ ರಾಜ್ಯದ ಆಯಾ ಭಾಗಗಳ ವೈಶಿಷ್ಟ್ಯತೆಗಳಾಗಿದ್ದವು.
ನಿವೃತ್ತ ನೌಕರರು, ವೃದ್ದರಿಗೆ ವರದಾನ ಅಂಚೆ ಕಛೇರಿಯ ಈ ಯೋಜನೆ
ಇದನ್ನು ತಾಯಂದಿರು ತಮ್ಮ ಮನೆಯ ಹಿರಿಯ ಸದಸ್ಯರಿಂದ ಕಲಿತು, ಪದೇಪದೇ ತಯಾರಿಸಿ ನೈಪುಣ್ಯತೆ ಪಡೆದು, ತಮ್ಮ ಮಗಳಿಗೆ ಖಾದ್ಯವನ್ನು ಹಸ್ತಾಂತರಿಸುತ್ತಿದ್ದರು. ಇದು ಅಡುಗೆಯ ಸಂಸ್ಕೃತಿಯೂ ಹೌದು.
ಅಂಥದ್ದೇ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಖಾದ್ಯಗಳ ಸಂರಕ್ಷಣೆಯ ಹೊಣೆಯನ್ನು ಕಾಶ್ಮೀರದ ಯುವತಿ ಆಸ್ಮಾ ಭಟ್ ಹೊತ್ತಿದ್ದಾರೆ. ಮೊದಲ ವರ್ಷ ಬಿ.ಎ. ವ್ಯಾಸಂಗ ಮಾಡುತ್ತಿರುವ ಆಸ್ಮಾ ಭಟ್, ಆನ್‌ಲೈನ್ ಮೂಲಕ ಖಾದ್ಯಗಳ ತಯಾರಿಕೆ ಆರ್ಡರ್ ಪಡೆದು ಗ್ರಾಹಕರಿಗೆ ಅದನ್ನು ತಲುಪಿಸುತ್ತಿದ್ದಾರೆ. ವಿದ್ಯಾರ್ಜನೆ ಜತೆಗೆ ಸ್ವಂತ ಉದ್ದಿಮೆಯನ್ನು ಸ್ಥಾಪಿಸಿಕೊಂಡು ಮುನ್ನೆಡೆಸುತ್ತಿರುವ ಯುವತಿಗೆ ಭಾರಿ ಮೆಚ್ಚಿಗೆ ಸಿಕ್ಕಿದೆ.
ಪ್ರಮುಖವಾಗಿ ಕಾಶ್ಮೀರ ಕಣಿವೆಯ ಸಾಂಪ್ರಾದಾಯಿಕ ಖಾದ್ಯಗಳಾದ ರೋಟಿ, ಮಕ್ಕಿ ಕೀ ರೋಟಿ, ನೂನ್ ಚಾಯ್, ಖೆವಾ ಸಿಹಿ ತಿನಿಸು, ಮೃಷ್ಟಾನ್ನ ಭೋಜನ ’ವಾಜ್ವಾನ್’ಗಳನ್ನು ಗ್ರಾಹಕರಿಗೆ ಸವಿಯಲು ಆಸ್ಮಾ ಉಣಬಡಿಸುತ್ತಿದ್ದಾರೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಕೇವಲ ಹಣದ ಶ್ರೀಮಂತಿಕೆ ಮಾತ್ರವೇ ವರ್ಗಾವಣೆ ಆದರೆ ಸಾಲದು. ಅಡುಗೆ ಕೋಣೆಯ ಖಾದ್ಯಗಳ ವೈವಿಧ್ಯತೆ ಕೂಡ ವರ್ಗಾವಣೆ ಆಗಬೇಕು. ಆಗ ಮಾತ್ರ ಒಂದು ಪ್ರದೇಶದ ಸಂಸ್ಕೃತಿ ಜೀವಂತವಾಗಿರುತ್ತದೆ ಎಂದು ಮುಗುಳುನಗೆ ಬೀರುತ್ತಾರೆ ಆಸ್ಮಾ ಭಟ್.