ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲನ್ನು ಕುಡಿಯುತ್ತಾರೆ. ಕೆಲವರು ಹಾಲಿನ ಜೊತೆ ಸಕ್ಕರೆ, ಬಾದಾಮಿ ಪೌಡರ್, ಕೇಸರಿ, ಅರಿಶಿನ ಹೀಗೆ ಹಲವು ರೀತಿಯ ಪೌಡರ್ ಗಳನ್ನು ಬೆರೆಸಿ ಕುಡಿಯುತ್ತಾರೆ.
ಆದರೆ ಯಾರೂ ಕೂಡ ಸೋಂಪಿನ ಹಾಲನ್ನು ಸೇವಿಸಿರಲಿಕ್ಕಿಲ್ಲ. ಹಾಲಿನ ಜೊತೆ ಸೋಂಪನ್ನು ಸೇರಿಸುವುದರಿಂದ ರುಚಿ ಹೆಚ್ಚುವುದಲ್ಲದೇ ಇದು ಆರೋಗ್ಯಕ್ಕೂ ತುಂಬ ಒಳ್ಳೆಯದು. ಒಂದು ಲೋಟ ಹಾಲಿಗೆ ಒಂದು ಚಮಚ ಸೋಂಪನ್ನು ಹಾಕಿ ಕುದಿಸಿ, ಸೋಸಿ ಹಾಲನ್ನು ಕುಡಿಯಬೇಕು.
ಸೋಂಪಿನ ಹಾಲು ಹೊಟ್ಟೆಯ ಸಮಸ್ಯೆ, ಅಜೀರ್ಣ, ಮಲಬದ್ಧತೆಯ ತೊಂದರೆಯನ್ನು ನಿವಾರಿಸುತ್ತದೆ. ಇದರಲ್ಲಿರುವ ಅಸ್ಟ್ರಾಗಲ್ ಮತ್ತು ಅನೆಥಾಲ್ ಅಂಶ ಹೊಟ್ಟೆಯ ನೋವು, ಗ್ಯಾಸ್ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಸೋಂಪಿನ ಹಾಲನ್ನು ಕುಡಿಯುವುದರಿಂದ ಖಾರದ ಪದಾರ್ಥಗಳಿಂದ ಉಂಟಾಗುವ ಎಸಿಡಿಟಿಯಿಂದ ದೂರವಿರಬಹುದು.
ಊಟದ ಮೊದಲು ಸೋಂಪಿನ ಹಾಲನ್ನು ಕುಡಿದರೆ ಬಹಳ ಹೊತ್ತು ಹಸಿವಾದ ಅನುಭವವಾಗುವುದಿಲ್ಲ. ಇದು ಶರೀರದಲ್ಲಿ ಮೆಟಾಬಾಲಿಜಮ್ ಹೆಚ್ಚಿಸುತ್ತದೆ. ಕ್ಯಾಲೊರಿಯನ್ನು ಕಡಿಮೆಗೊಳಿಸುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.
ಸೋಂಪಿನ ಹಾಲಿನಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ನಿಮ್ಮ ಕಣ್ಣು ಮಂಜು ಮಂಜಾಗಿ ಕಾಣಿಸುತ್ತಿದ್ದರೆ ಇದರಿಂದ ಪರಿಹಾರ ಸಿಗುತ್ತದೆ.
ಸೋಂಪಿನ ಹಾಲಿನಲ್ಲಿರುವ ಎಣ್ಣೆ ಮತ್ತು ಫೈಬರ್ ಅಂಶ ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರಹಾಕುತ್ತದೆ. ಇದರಿಂದ ರಕ್ತ ಶುದ್ಧವಾಗಿ ಚರ್ಮ ಕಾಂತಿಯುತವಾಗುತ್ತದೆ.