ಚಿಕ್ಕಮಕ್ಕಳು ಹೇಗೆ ಬೆಳೆಯುತ್ತಾರೆ ಎಂದು ಗೊತ್ತೇ ಆಗದಷ್ಟು ವೇಗದಲ್ಲಿ ಬೆಳೆಯುತ್ತಿರುತ್ತಾರೆ. ಈಗಂತೂ ಮಕ್ಕಳ ಫೋಟೋಶೂಟ್, ವಿಡಿಯೋ ಎಲ್ಲವೂ ತೀರಾ ಮಾಮೂಲು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಸ್ವಲ್ಪ ಭಿನ್ನವಾಗಿ ಆಲೋಚಿಸಿದ್ದಾರೆ. ಅದೇನೆಂದರೆ ಅವರ ಮಗಳಿಗೆ ಈಗ 20 ವರ್ಷ. ಆದರೆ ಹುಟ್ಟಿದಾಗಿನಿಂದಲೂ ಪ್ರತಿದಿನವೂ ಮಗಳ ವಿಡಿಯೋ ಮಾಡುತ್ತಿದ್ದ ಈ ತಂದೆಯ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ.
ಡಚ್ ನಿರ್ದೇಶಕ ಫ್ರಾನ್ ಹಫ್‌ಮಿಸ್ಟರ್ ಎನ್ನುವವರು ತಮ್ಮ ಮಗಳ 20 ವರ್ಷಗಳ ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ಹುಟ್ಟಿದಾಗಿನಿಂದಲೂ ಪ್ರತಿದಿನವೂ ಮಗಳ ವಿಡಿಯೋ ಮಾಡಿದ್ದಾರೆ. ಅದನ್ನು ಫಾಸ್ಟ್ ಮೂವ್ಮೆಂಟ್ನಲ್ಲಿ ಎರಡೂವರೆ ನಿಮಿಷಗಳವರೆಗೆ ಆಗುವಂತೆ ಸಂಪೂರ್ಣ ಚಿತ್ರಣ ತೋರಿಸಿದ್ದಾರೆ. ಪುಟಾಣಿಯಾಗಿದ್ದ ಮಗಳು 20 ವರ್ಷ ದಿನವೂ ಹೇಗೆ ಬೆಳೆದಳು ಎಂದು ವಿಡಿಯೋ ತೋರಿಸುತ್ತದೆ.
ಇದನ್ನು ನೋಡಿದ ಹಲವರು ಹೌದಲ್ವಾ? ಇಂಥದ್ದೊಂದು ವಿಡಿಯೋ ಮಾಡಬೇಕು ಎನ್ನುವುದು ಯಾರ ತಲೆಗೂ ಬಂದಿರುವುದಿಲ್ಲ ಎಂದಿದ್ದಾರೆ. ಅಪ್ಪ-ಮಗಳ ಅದ್ಭುತ ಬಾಂಧವ್ಯಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಬೇಕೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಕುತೂಹಲ ಹಾಗೂ ಅಪರೂಪದ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.