ಮಡಿಕೇರಿ: ಪಶುಸಂಗೋಪನೆ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕೊಡಗು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯಾಪ್ತಿಗೆ ಒಳಪಡುವ ಎಲ್ಲಾ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಆರ್ಥಿಕ ನೆರವು ಒದಗಿಸಲು ಸಾಲ ಅಭಿಯಾನ ಹಮ್ಮಿಕೊಂಡಿದೆ.
ಹಣಕಾಸು ಸೇವೆಗಳ ಇಲಾಖೆಯು ಹೈನುಗಾರಿಕೆ, ಕುರಿ ಮೇಕೆ, ಹಂದಿ, ಕೋಳಿ ಸಾಕಾಣಿಕೆ ಹಾಗೂ ಮೀನುಗಾರಿಕೆ ಉಪ ಕಸುಬುಗಳನ್ನು ಕೈಗೊಳ್ಳಲು ಅವಶ್ಯ ಇರುವ ದುಡಿಮೆ ಬಂಡವಾಳವನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಅರ್ಥಿಕ ನೆರವು ಒದಗಿಸಲು ಸಾಲ ಅಭಿಯಾನವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಮುಂದಿನ ಮೂರು ತಿಂಗಳವರೆಗೆ ಅಯೋಜಿಸಲು ಎಲ್ಲ ಬ್ಯಾಂಕುಗಳಿಗೆ ನಿರ್ದೇಶಿಸಿದೆ.
ಹೈನುಗಾರಿಕೆ, ಕುರಿ ಮೇಕೆ, ಹಂದಿ, ಕೋಳಿ ಸಾಕಾಣಿಕೆ ಹಾಗೂ ಮೀನುಗಾರಿಕೆ ಉಪ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯಲ್ಲಿನ ರೈತರು ಆಯಾ ತಾಲೂಕಿನ ಸಹಾಯ ನಿರ್ದೇಶಕರು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ, ಅಗತ್ಯ ದಾಖಾಲಾತಿಗಳನ್ನು ಸಲ್ಲಿಸಿ, ದುಡಿಮೆ ಬಂಡವಾಳಕ್ಕೆ ಅರ್ಥಿಕ ನೆರವು ಪಡೆಯ ಬಹುದಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 2 ಲಕ್ಷ ರೂ. ಗಳವರೆಗಿನ ಸಾಲದ ಮೊತ್ತಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ. ಅಲ್ಲದೆ ಸಕಾಲದಲ್ಲಿ ಈ ಸಾಲವನ್ನು ಮರುಪಾವತಿ ಮಾಡಿದಲ್ಲಿ, ವಾರ್ಷಿಕ ಶೇ. 3ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನ ಸೌಲಭ್ಯ ಈ ಪಡೆಯಬಹುದಾಗಿದ್ದು, ಆಸಕ್ತ ರೈತರು ತಮ್ಮ ಅವಶ್ಯಕತೆಗನುಗುಣವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.