alex Certify ಕೃಷಿ ಕಾನೂನು ವಾಪಸ್ ಪಡೆಯಲು ಕಾರಣವಾಯ್ತಾ ಈ ಎಲ್ಲ ಅಂಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಕಾನೂನು ವಾಪಸ್ ಪಡೆಯಲು ಕಾರಣವಾಯ್ತಾ ಈ ಎಲ್ಲ ಅಂಶ…!

ಮೋದಿ ಸರ್ಕಾರ ಮೂರು ಹೊಸ ಕೃಷಿ ಕಾನೂನನ್ನು ವಾಪಸ್ ಪಡೆದಿದೆ. ಹೊಸ ಕಾನೂನು ಘೋಷಣೆಯಾಗ್ತಿದ್ದಂತೆ ರೈತರ ವಿರೋಧ ಶುರುವಾಗಿತ್ತು. ರೈತರು ನಿರಂತರ ಹೋರಾಟ ನಡೆಸಿದ್ದರು.

ಹೊಸ ಕಾನೂನು ಜಾರಿಯಾದ ತಕ್ಷಣ ಕೃಷಿ ಕ್ಷೇತ್ರ, ಬಂಡವಾಳಶಾಹಿಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳ ಕೈ ಸೇರಲಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ ಎಂದು ರೈತ ಸಂಘಟನೆಗಳು ಆರೋಪಿಸಿದ್ದವು.

ಹೊಸ ಮಸೂದೆಯ ಪ್ರಕಾರ, ಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅಗತ್ಯ ವಸ್ತುಗಳ ಪೂರೈಕೆಯನ್ನು ಸರ್ಕಾರ ನಿಯಂತ್ರಿಸುತ್ತದೆ. ಕ್ಷಾಮ, ಯುದ್ಧ, ಅನಿರೀಕ್ಷಿತ ಬೆಲೆ ಏರಿಕೆ ಅಥವಾ ತೀವ್ರ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮಾತ್ರ ಸರ್ಕಾರ ಮಧ್ಯ ಪ್ರವೇಶ ಮಾಡುತ್ತದೆ. ಇದ್ರಿಂದ ರೈತರಿಗೆ ತೊಂದರೆಯಾಗಲಿದೆ ಎಂಬುದು ರೈತರ ವಾದವಾಗಿತ್ತು.

ಮಾರುಕಟ್ಟೆಯ ಹೊರಗೆ ರೈತರಿಗೆ ಕನಿಷ್ಠ ಬೆಲೆ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈ ಕಾನೂನಿನಲ್ಲಿ ಸ್ಪಷ್ಟಪಡಿಸಿಲ್ಲ ಎಂದು ರೈತರು ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಹೆಚ್ಚು ಉತ್ಪಾದನೆಯಾದರೆ ವರ್ತಕರು, ರೈತರನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ಒತ್ತಾಯಿಸುವ ಸಾಧ್ಯತೆ ಇದೆ.

ಮೂರನೇ ಕಾರಣವೆಂದರೆ ಸರ್ಕಾರವು ಬೆಳೆಗಳನ್ನು ಸಂಗ್ರಹಿಸಲು ಅವಕಾಶ ನೀಡುತ್ತಿದೆ. ಆದರೆ ರೈತರು ತರಕಾರಿಗಳು ಅಥವಾ ಹಣ್ಣುಗಳನ್ನು ಸಂಗ್ರಹಿಸಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ ಎಂದು ರೈತರು ಹೋರಾಟಕ್ಕಿಳಿದಿದ್ದರು.

ಮೋದಿ ಸರ್ಕಾರ ಎಲ್ಲ ಮೂರು ಕಾನೂನನ್ನು ವಾಪಸ್ ಪಡೆದಿದೆ. ಇದಕ್ಕೆ ಕೆಲ ಮುಖ್ಯ ಕಾರಣವಿದೆ ಎಂದು ತಜ್ಞರು ಹೇಳ್ತಿದ್ದಾರೆ.

ಮೊದಲನೇಯದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ : ಉತ್ತರ ಪ್ರದೇಶದಲ್ಲೂ ಕಾನೂನಿಗೆ ವಿರೋಧ ವ್ಯಕ್ತವಾಗಿತ್ತು. ಪಶ್ಚಿಮ ಉತ್ತರ ಪ್ರದೇಶದಿಂದ ಆರಂಭವಾದ ಕೃಷಿ ಕಾನೂನುಗಳ ವಿರೋಧ ಪೂರ್ವ ಉತ್ತರ ಪ್ರದೇಶಕ್ಕೂ ವ್ಯಾಪಿಸಿತ್ತು. ರೈತರ ಚಳವಳಿಯನ್ನು ಮುನ್ನಡೆಸುತ್ತಿರುವ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್  ಮನೆಯೂ ಪಶ್ಚಿಮ ಉತ್ತರ ಪ್ರದೇಶದಲ್ಲಿದೆ. ಹಲವೆಡೆ ಬಿಜೆಪಿ ಮುಖಂಡರನ್ನು ಗ್ರಾಮಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ. ಹಲವೆಡೆ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಬಿಜೆಪಿಯ ದೊಡ್ಡ ನಾಯಕರು ಪಶ್ಚಿಮ ಉತ್ತರ ಪ್ರದೇಶಕ್ಕೆ ಹೋಗಲು ಹಿಂದೇಟು ಹಾಕಿದ್ದರು. ಉತ್ತರ ಪ್ರದೇಶದ ಗೆಲುವು, ದೇಶದ ಗೆಲುವು ಎಂದೇ ಬಿಂಬಿತವಾಗುತ್ತದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಪ್ರದರ್ಶನ ನೀಡಿತ್ತು. 2017ರ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಯುಪಿಯಲ್ಲಿ ಬಿಜೆಪಿ 110 ಸ್ಥಾನಗಳಲ್ಲಿ 88 ಸ್ಥಾನಗಳನ್ನು ಗೆದ್ದಿತ್ತು. 2012ರ ಚುನಾವಣೆಯಲ್ಲಿ ಕೇವಲ 38 ಸ್ಥಾನಗಳನ್ನು ಪಡೆದಿತ್ತು. ಆದರೆ ರೈತರ ಆಂದೋಲನವನ್ನು ಗಮನಿಸಿದರೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದರು.

ಸರ್ಕಾರದ ವಿರುದ್ಧ ದೇಶದಾದ್ಯಂತ ರೈತರ ಆಕ್ರೋಶ : ನರೇಂದ್ರ ಮೋದಿ ಸರ್ಕಾರದ 3 ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೇಶಾದ್ಯಂತ ರೈತರನ್ನು ಸಜ್ಜುಗೊಳಿಸಲಾಗಿತ್ತು. ಈ ಕಾನೂನುಗಳ ವಿರುದ್ಧ ದೇಶಾದ್ಯಂತ ರ್ಯಾಲಿಗಳನ್ನು ನಡೆದವು. ಕಿಸಾನ್ ಮಹಾಪಂಚಾಯತ್ ಗಳನ್ನು ಆಯೋಜಿಸಲಾಯಿತು. ಈ ರೈತ ಚಳವಳಿಯ ಪ್ರಭಾವವು ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳ ಜೊತೆಗೆ ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ನಡೆಯಿತು.

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಚಳವಳಿ ಆರಂಭವಾಗಿತ್ತು. ಮೊದಲನೆಯದಾಗಿ, 2017 ರಲ್ಲಿ ತಮಿಳುನಾಡಿನ ರೈತರು ದೆಹಲಿಗೆ ಬಂದು ಜಂತರ್ ಮಂತರ್‌ನಲ್ಲಿ ಹಲವು ದಿನಗಳ ಕಾಲ ಧರಣಿ ನಡೆಸಿದರು. ಮರುವರ್ಷ ಮಹಾರಾಷ್ಟ್ರದಲ್ಲಿ ರೈತರ ಚಳವಳಿ ಆರಂಭವಾಯಿತು. ಸಾವಿರಾರು ರೈತರು ಭಿವಂಡಿಯಿಂದ ಮುಂಬೈಗೆ ಮೆರವಣಿಗೆ ನಡೆಸಿದರು. ನರೇಂದ್ರ ಮೋದಿಯವರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ತಂದಾಗ ದೇಶದಾದ್ಯಂತ ರೈತರು ಅದರ ವಿರುದ್ಧ ದನಿಗೂಡಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲೂ ರೈತರ ಹೋರಾಟಕ್ಕೆ ಬೆಂಬಲ : ವಿಶ್ವದ ಅನೇಕ ಗಣ್ಯರು ರೈತರ ಚಳವಳಿಯನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದರು. ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ರೈತರ ಚಳವಳಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಭಾರತದ ರೈತರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಅವರು ಹೇಳಿದರು. ಅಮೆರಿಕದ ಗಾಯಕಿ ಹಾಗೂ ನಟಿ ರಿಹಾನ್ನಾ ಕೂಡ ರೈತರ ಚಳವಳಿಯನ್ನು ಬೆಂಬಲಿಸಿದ್ದರು. ರೈತ ಚಳವಳಿಗೆ ಬೆಂಬಲ ನೀಡಿದವರಲ್ಲಿ ಪ್ರಸ್ತುತ ಅಮೆರಿಕದ ಉಪಾಧ್ಯಕ್ಷ ಸ್ಥಾನದಲ್ಲಿರುವ ಕಮಲಾ ಹ್ಯಾರಿಸ್ ಕೂಡ ಸೇರಿದ್ದಾರೆ. ಇದಲ್ಲದೆ, ಕೃಷಿ ಕಾನೂನುಗಳನ್ನು ವಿರೋಧಿಸಿ ಬ್ರಿಟನ್, ಅಮೆರಿಕ ಮತ್ತು ಕೆನಡಾದಂತಹ ದೇಶಗಳಲ್ಲಿ ಭಾರತೀಯ ರಾಯಭಾರ ಕಚೇರಿಯ ಹೊರಗೆ ಪ್ರದರ್ಶನ ನಡೆದಿದೆ.

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಆಂದೋಲನಗಳ ಯುಗ ಪ್ರಾರಂಭವಾಯಿತು. ಪುಣೆಯ ಫಿಲ್ಮ್ ಮತ್ತು ಟಿವಿ ಸಂಸ್ಥೆಯಲ್ಲಿ ನಿರ್ದೇಶಕರ ನೇಮಕದೊಂದಿಗೆ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಪುಣೆಯಿಂದ ಆರಂಭವಾದ ಈ ಸರಣಿ ಪ್ರತಿಭಟನೆಗಳು, ದೆಹಲಿಯ ಕ್ಯಾಂಪಸ್‌ಗಳನ್ನು ತಲುಪಿದವು.

ಅಡುಗೆ ಎಣ್ಣೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಬಂಡವಾಳ ಹಿಂತೆಗೆತವು ನರೇಂದ್ರ ಮೋದಿ ಸರ್ಕಾರದ ವಿರುದ್ದ ಸಾರ್ವಜನಿಕರು ಅಸಮಾಧಾನಗೊಳ್ಳುವಂತೆ ಮಾಡಿತ್ತು. ಈ ಎಲ್ಲ ವಿಷ್ಯಗಳು ಕೃಷಿ ಕಾನೂನು ಹಿಂಪಡೆಯಲು ಕಾರಣವಾಗಿದೆ ಎನ್ನಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...