ಅಪಘಾತದಲ್ಲಿ ಗಾಯಗೊಂಡಿದ್ದ ಬೀದಿ ಹಸುವಿಗೆ ಸರ್ಜರಿ ಕೈಗೊಂಡ ವೇಳೆ ಅದರ ಹೊಟ್ಟೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್ ಹಾಗೂ ಲೋಹದ ವಸ್ತುಗಳು ಸಿಕ್ಕ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ವರದಿಯಾಗಿದೆ.
ಸುಮಾರು 4 ಗಂಟೆಗಳ ಕಾಲ ಹಸುವಿಗೆ ಚಿಕಿತ್ಸೆ ಕೈಗೊಂಡ ಪಶು ವೈದ್ಯಾಧಿಕಾರಿಗಳು ಬರೋಬ್ಬರಿ 71 ಕೆಜಿ ತೂಕದ ಪ್ಲಾಸ್ಟಿಕ್ ಹಾಗೂ ಸೂಜಿ, ನಾಣ್ಯಗಳು, ಗಾಜಿನ ಚೂರು, ಮೊಳೆ ಸೇರಿದಂತೆ ಅಪಾಯಕಾರಿ ವಸ್ತುಗಳನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಸುವಿನ ಮೇಲೆ ಮಾಡಲಾದ ಸರ್ಜರಿ ಯಶಸ್ವಿಯಾಗಿದೆ. ಆದರೆ ಈ ಬೀದಿ ಹಸು ಮಾತ್ರ ಇನ್ನೂ ಪ್ರಾಣಾಪಾಯದಿಂದ ಪಾರಾಗಿಲ್ಲ. ಮುಂದಿನ 10 ದಿನಗಳು ಈ ಹಸುವಿನ ಪಾಲಿಗೆ ಬಹಳ ನಿರ್ಣಾಯಕವಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ. ಅತುಲ್ ಮೌರ್ಯ ಮಾಹಿತಿ ನೀಡಿದ್ದಾರೆ. ಮೂವರು ವೈದ್ಯರ ತಂಡ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ.
ಫರಿದಾಬಾದ್ನಲ್ಲಿ ಕಾರು ಅಪಘಾತಕ್ಕೆ ಒಳಗಾಗಿದ್ದ ಈ ಹಸುವನ್ನ ರಕ್ಷಣೆ ಮಾಡಲಾಗಿದೆ. ಈ ಹಸುವನ್ನ ಕೂಡಲೇ ದೇವಾಶ್ರಯ ಪಶು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ವೇಳೆ ಗಾಯಗೊಂಡ ಹಸು ತನ್ನ ಹೊಟ್ಟೆಯನ್ನ ತಾನೇ ಒದ್ದುಕೊಳ್ಳುತ್ತಿರೋದನ್ನ ಗಮನಿಸಿದ್ದಾರೆ.
ಹೀಗಾಗಿ ಹಸುವಿನ ಹೊಟ್ಟೆಯ ಎಕ್ಸ್ ರೇ ಹಾಗೂ ಅಲ್ಟ್ರಾಸೌಂಡ್ ಪರೀಕ್ಷೆಗಳನ್ನ ಗಮನಿಸಿದ ಬಳಿಕ ಇದರ ಹೊಟ್ಟೆಯಲ್ಲಿ ಇಂತಹ ಅಪಾಯಕಾರಿ ವಸ್ತುಗಳು ಇರೋದು ವೈದ್ಯರ ಗಮನಕ್ಕೆ ಬಂದಿತ್ತು.