ಪ್ರಪಂಚದಾದ್ಯಂತದ ಸುಮಾರು 1.2 ಮಿಲಿಯನ್ ಜನರು ಚತುರ್ವಾರ್ಷಿಕ ಫುಟ್‌ಬಾಲ್ ಈವೆಂಟ್ ವೀಕ್ಷಿಸಲು ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ. ಇದು ಕೋವಿಡ್-19 ಸಾಂಕ್ರಾಮಿಕದ ನಂತರದ ಅತಿದೊಡ್ಡ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಒಂದಾಗಿದೆ.
ನ್ಯೂ ಮೈಕ್ರೊಬ್ಸ್ ಮತ್ತು ನ್ಯೂ ಇನ್ಫೆಕ್ಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಫಿಫಾ ವಿಶ್ವಕಪ್ ಅನ್ನು ವೀಕ್ಷಿಸಲು ಈ ಪರಿಯ ಜನರು ಸೇರುತ್ತಿರುವುದರಿಂದ ಕೋವಿಡ್ ಸೋಂಕಿನ ಇನ್ನೊಂದು ಭಾಗವಾಗಿರುವ ಒಂಟೆ ಜ್ವರದಿಂದ (ಕ್ಯಾಮೆಲ್ ಫ್ಲೂ) ಬಳಲುವ ಅಪಾಯ ಉಂಟಾಗುವ ಭೀತಿ ಇದೆ. ಈ ಬಗ್ಗೆ ವಿಜ್ಞಾನಿಗಳು ಆತಂಕಗೊಂಡಿದ್ದಾರೆ.
ಕೋವಿಡ್ ಇನ್ನೂ ಸಂಪೂರ್ಣ ತೊಲಗದ ನಡುವೆಯೇ ಕ್ಯಾಮೆಲ್ ಫ್ಲೂ ಒಕ್ಕರಿಸಿದೆ. ಇದು ಮಾತ್ರವಲ್ಲದೇ ಅಧ್ಯಯನದ ಪ್ರಕಾರ, ವೆಕ್ಟರ್-ಹರಡುವ ರೋಗಗಳಾದ ಚರ್ಮದ ಲೀಶ್ಮೇನಿಯಾಸಿಸ್, ಮಲೇರಿಯಾ, ಡೆಂಗ್ಯೂ, ರೇಬೀಸ್, ದಡಾರ, ಹೆಪಟೈಟಿಸ್ ಎ ಮತ್ತು ಬಿ ಮತ್ತು ಪ್ರಯಾಣಿಕರ ಅತಿಸಾರದ ಕೂಡ ಅಪಾಯವಿದೆ ಎನ್ನಲಾಗಿದೆ.
ಕತಾರ್ ತನ್ನ ಆರೋಗ್ಯ ಕ್ಷೇತ್ರವನ್ನು ಸಾಕಷ್ಟು ಸಿದ್ಧಗೊಳಿಸಿದ್ದರೂ, ಸೋಂಕುಗಳ ಹರಡುವಿಕೆಯ ಅಪಾಯದ ಕುರಿತು ತಳ್ಳಿಹಾಕುವಂತಿಲ್ಲ. ಈ ಬಗ್ಗೆ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.