ತನ್ನ ಕೆಲಸದ ಅವಧಿಗೂ 9 ಗಂಟೆ ಮುನ್ನ ಬಿಯರ್ ಕುಡಿದ ಕಾರಣಕ್ಕೆ ಮಹಿಳಾ ಸಿಬ್ಬಂದಿಯನ್ನು ಸೀಫುಡ್ ಕಾರ್ಖಾನೆಯಿಂದ ತೆಗೆದುಹಾಕಲಾಗಿತ್ತು. ಆದರೆ ಇದೀಗ ಈ ಮಹಿಳೆಗೆ 5.5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿದೆ.
ಸ್ಕಾಟ್ಲೆಂಡ್ನ ಎಡಿನ್ಬರ್ಗ್ ಲಿವಿಂಗ್ಸ್ಟನ್ನಲ್ಲಿರುವ ಕಾರ್ಖಾನೆಯಿಂದ ಮಾಲ್ಗೋರ್ಜಾಟಾ ಕ್ರೋಲಿಕ್ಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆಯಿಂದ ಆಕೆಯ ಶಿಫ್ಟ್ ಆರಂಭವಾಗುವುದರಲ್ಲಿತ್ತು. ಆದರೆ ಈಕೆ ಮುಂಜಾನೆ 5 ಗಂಟೆ ಸುಮಾರಿಗೆ ಮೂರು ಬಾಟಲಿ ಬಿಯರ್ ಸೇವನೆ ಮಾಡಿದ್ದಳು.
ಕಂಪನಿಯು ಮದ್ಯಪಾನ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವುದಾಗಿ ಹೇಳಿದೆ. ಈ ಕಾರ್ಖಾನೆಯಲ್ಲಿ ಯಾರ ಶಿಫ್ಟ್ ಇದೆಯೋ ಅವರು ಇಡೀ ದಿನ ಮದ್ಯಸೇವನೆ ಮಾಡಲು ನಿರ್ಬಂಧ ಹೇರಲಾಗಿದೆ.
ಆದರೆ ಕೋರ್ಟ್ನಲ್ಲಿ ಈ ಪ್ರಕರಣದ ಸಂಬಂಧ ತನಿಖೆ ನಡೆಸಿದ ನ್ಯಾಯಾಧೀಶರು ಇಲ್ಲಿ ಕ್ರೋಲಿಕ್ಗೆ ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಳಗ್ಗೆ ಪಾಳಿಯಲ್ಲಿ ಕೆಲಸ ಮಾಡಿ ರಾತ್ರಿ ಮದ್ಯ ಸೇವನೆ ಮಾಡಬಹುದು ಎಂದಾದರೆ ಮಧ್ಯಾಹ್ನದ ಶಿಫ್ಟ್ ಇರುವಾಗ ಮುಂಜಾನೆ ಸಮಯದಲ್ಲಿ ಮದ್ಯಪಾನ ಮಾಡುವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಹಾಗೂ ಪರಿಹಾರ ರೂಪದಲ್ಲಿ ಕಾರ್ಖಾನೆಯು 5.5 ಲಕ್ಷ ರೂಪಾಯಿಗಳನ್ನು ಕ್ರೋಲಿಕ್ಗೆ ನೀಡಬೇಕು ಎಂದು ಹೇಳಿದ್ರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಈ ಘಟನೆ ಸಂಭವಿಸಿದ್ದು ಇದಕ್ಕೂ ಮುನ್ನ 11 ವರ್ಷಗಳ ಕಾಲ ಕ್ರೋಲಿಕ್ ಇದೇ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿದ್ದರು.