ಸಂಬಳ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬೇಸತ್ತ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೆ ಶರಣಾದ ಘಟನೆಯು ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ವೆಲ್ಡಾಂಡಾದ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ 29 ವರ್ಷದ ವ್ಯಕ್ತಿಯು ಶನಿವಾರ ಸೂಸೈಡ್ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿಯು ಸಂಬಳ ಸರಿಯಾದ ಸಮಯಕ್ಕೆ ಬಾರದ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.
ಮೃತ ಉಪನ್ಯಾಸಕನನ್ನು ಗಣೇಶ್ ಎಂದು ಗುರುತಿಸಲಾಗಿದೆ. ಇವರು ವೆಲ್ಡಾಂಡಾದ ಬೊಲ್ಲಂಪಲ್ಲೆ ನಿವಾಸಿಯಾಗಿದ್ದರು ಎನ್ನಲಾಗಿದೆ. ಕಳೆದ 18 ತಿಂಗಳಿನಿಂದ ಇವರಿಗೆ ಸಂಬಳ ಸಂದಾಯವಾಗಿರಲಿಲ್ಲ.
ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ ಕಾಲೇಜಿನಲ್ಲಿ ಅವರ ಹುದ್ದೆಯನ್ನು ಕೂಡ ನವೀಕರಣ ಮಾಡಿರಲಿಲ್ಲ ಎಂದು ವೆಲ್ದಂಡ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ಮಾಹಿತಿ ನೀಡಿದ್ದಾರೆ.