ಅಲರ್ಜಿ ಕಾರಣದಿಂದ ಕೆಲವೊಮ್ಮೆ ಕಣ್ಣಿನಲ್ಲಿ ತುರಿಕೆ, ಉರಿ ಮತ್ತು ನೀರಿಳಿಯುವ ಲಕ್ಷಣಗಳು ಕಂಡುಬಂದೀತು. ಕಣ್ಣುಗಳನ್ನು ಉಜ್ಜಿಕೊಳ್ಳುವುದು ಇದಕ್ಕೆ ಪರಿಹಾರವಲ್ಲ.
ಕೈಯನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯದಿರಿ. ಕೈಯಲ್ಲಿರುವ ಕೊಳೆಯೇ ಕಣ್ಣೊಳಗೆ ಹೋಗಿ ತುರಿಕೆ ಮತ್ತಷ್ಟು ಹೆಚ್ಚಾಗಬಹುದು. ತಣ್ಣಗಿನ ನೀರಿನಿಂದ ಮುಖವನ್ನು ತೊಳೆಯುವುದರಿಂದ ಅಥವಾ ಸ್ವಚ್ಛವಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದರಿಂದ ಕಣ್ಣನ್ನು ಸ್ವಚ್ಚಗೊಳಿಸುವುದರಿಂದ ಈ ತುರಿಕೆ ಸಮಸ್ಯೆ ದೂರವಾಗುತ್ತದೆ.
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬಳಸುವ ಅಲೋವೇರಾವನ್ನು ನೀವು ಕಣ್ಣು ಸ್ವಚ್ಛಗೊಳಿಸಲೂ ಬಳಸಬಹುದು. ಇದರ ಜೆಲ್ ಗೆ ಐಸ್ ಕ್ಯೂಬ್ ಬೆರೆಸಿ. ಸಣ್ಣ ಹತ್ತಿ ಉಂಡೆಯನ್ನು ನೀರಿನಲ್ಲಿ ಅದ್ದಿ ಕಣ್ರೆಪ್ಪೆಗಳ ಮೇಲೆ ಇಟ್ಟುಕೊಳ್ಳಿ. ಐದು ನಿಮಿಷ ಹೀಗೆ ಮಾಡುವುದರಿಂದ ತುರಿಕೆ ಸಮಸ್ಯೆ ನಿವಾರಣೆಯಾಗುತ್ತದೆ.
ಹಾಲು ಮತ್ತು ರೋಸ್ ವಾಟರ್ ಬೆರೆಸಿದ ಮಿಶ್ರಣವನ್ನು ಇದೇ ರೀತಿ ಮಾಡುವುದರಿಂದಲೂ ಅತ್ಯುತ್ತಮ ಪ್ರಯೋಜನ ಪಡೆದುಕೊಳ್ಳಬಹುದು. ಸೋಂಪು ಕಾಳುಗಳು ಅಥವಾ ಕೊತ್ತಂಬರಿ ಕುದಿಸಿದ ನೀರಿನ ಬಳಕೆಯಿಂದಲೂ ಕಣ್ಣಿನ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.