ವೇತನ, ಪಿಂಚಣಿ, ಇಎಂಐಗೆ ಸಂಬಂಧಿಸಿದಂತೆ ಆಗಸ್ಟ್ ಒಂದರಿಂದ ನಿಯಮ ಬದಲಾಗಲಿದೆ. ವೇತನ, ಪಿಂಚಣಿ, ಇಎಂಐಗಾಗಿ ಬ್ಯಾಂಕ್ ಕೆಲಸದ ದಿನಗಳನ್ನು ಕಾಯ್ಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ನಿಯಮಗಳನ್ನು ಬದಲಾಯಿಸಿದೆ. ಈ ಬದಲಾವಣೆಗಳು ಆಗಸ್ಟ್ ಒಂದರಿಂದ ಜಾರಿಗೆ ಬರಲಿವೆ.
ನ್ಯಾಚ್ ಸೇವೆಗಳು ವಾರದಲ್ಲಿ ಏಳು ದಿನಗಳು ಲಭ್ಯವಿರಲಿವೆ. ಸದ್ಯ ಸೋಮವಾರದಿಂದ ಶುಕ್ರವಾರದವರೆಗೆ ಬ್ಯಾಂಕುಗಳು ತೆರೆದಿರುವಾಗ ಮಾತ್ರ ಈ ಸೌಲಭ್ಯಗಳು ಲಭ್ಯವಿದ್ದವು. ಬ್ಯಾಂಕಿನ ಕೆಲಸದ ಸಮಯದಲ್ಲಿ ಇದನ್ನು ಮಾಡಬೇಕಾಗಿತ್ತು. ಕೆಲವೊಮ್ಮೆ ತಿಂಗಳ ಮೊದಲ ದಿನವು ವಾರಾಂತ್ಯಕ್ಕೆ ಬರ್ತಿತ್ತು. ಈ ಕಾರಣದಿಂದಾಗಿ ಜನರು ತಮ್ಮ ಸಂಬಳವನ್ನು ಠೇವಣಿ ಇರಿಸಲು ಸೋಮವಾರದವರೆಗೆ ಕಾಯಬೇಕಾಗಿತ್ತು. ಆಗಸ್ಟ್ 1ರಿಂದ ವಾರದ ಏಳೂ ದಿನ ಸೇವೆ ಸಿಗಲಿದೆ. ರಜಾ ದಿನಗಳಲ್ಲೂ ಈ ಸೇವೆ ಪಡೆಯಬಹುದಾಗಿದೆ.
ಜೂನ್ ತಿಂಗಳಿನಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಈ ನಿಯಮವನ್ನು ಆಗಸ್ಟ್ 1ರಿಂದ ಜಾರಿಗೆ ತರಲಾಗ್ತಿದೆ.
ನ್ಯಾಚ್, ಭಾರತದ ಪಾವತಿ ನಿಗಮ ನಿರ್ವಹಿಸುವ ಬೃಹತ್ ಪಾವತಿ ವ್ಯವಸ್ಥೆಯಾಗಿದೆ. ಇದು ಲಾಭಾಂಶ, ಬಡ್ಡಿ, ಸಂಬಳ ಮತ್ತು ಪಿಂಚಣಿಯಂತಹ ವಿವಿಧ ರೀತಿಯ ಸಾಲ ವರ್ಗಾವಣೆಯ ಸೌಲಭ್ಯವನ್ನು ಒದಗಿಸುತ್ತದೆ. ವಿದ್ಯುತ್ ಬಿಲ್, ಗ್ಯಾಸ್, ಟೆಲಿಫೋನ್, ನೀರು, ಸಾಲದ ಇಎಂಐ, ಮ್ಯೂಚುವಲ್ ಫಂಡ್ ಹೂಡಿಕೆ ಮತ್ತು ವಿಮಾ ಪ್ರೀಮಿಯಂ ಪಾವತಿಸುವ ಸೌಲಭ್ಯವನ್ನೂ ಒದಗಿಸುತ್ತದೆ.