ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸುವುದು ಸಾಮಾನ್ಯ ಸಂಗತಿ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರು ಸಾಲವನ್ನು ಸಂಪೂರ್ಣವಾಗಿ ಪಾವತಿ ಮಾಡಿದರೂ ಸಹ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಆಸ್ತಿ ಪತ್ರಗಳನ್ನು ಹಿಂದಿರುಗಿಸಲು ಸತಾಯಿಸುವ ಪ್ರಕರಣಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಖಡಕ್ ಸೂಚನೆ ನೀಡಿದೆ.
ಗ್ರಾಹಕರು ತಮ್ಮ ಸಾಲವನ್ನು ಸಂಪೂರ್ಣವಾಗಿ ಮರು ಪಾವತಿ ಮಾಡಿದ ಬಳಿಕ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳು 30 ದಿನಗಳ ಒಳಗಾಗಿ ಎಲ್ಲ ಮೂಲ ಚರ ಅಥವಾ ಸ್ಥಿರ ಆಸ್ತಿಯ ದಾಖಲೆ ಪತ್ರಗಳನ್ನು ಹಸ್ತಾಂತರಿಸಬೇಕಿದ್ದು, ಒಂದೊಮ್ಮೆ ಇದರಲ್ಲಿ ವಿಫಲವಾದರೆ ದಿನವೊಂದಕ್ಕೆ 5000 ರೂಪಾಯಿಗಳನ್ನು ಗ್ರಾಹಕರಿಗೆ ಪಾವತಿಸಬೇಕಾಗುತ್ತದೆ. ಬುಧವಾರದಂದು ಈ ಕುರಿತು ನಿರ್ದೇಶನ ನೀಡಲಾಗಿದ್ದು, ಡಿಸೆಂಬರ್ 1ರಿಂದಲೇ ಈ ನೀತಿ ಅನ್ವಯವಾಗಲಿದೆ.
ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರು ತಾನು ಪಡೆದ ಸಾಲವನ್ನು ಪೂರ್ಣವಾಗಿ ತೀರಿಸಿದ ಬಳಿಕವೂ ಸಹ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ವಿವಿಧ ಕಾರಣಗಳನ್ನು ನೀಡಿ ಆಸ್ತಿ ಪತ್ರಗಳನ್ನು ನೀಡಲು ವಿಳಂಬ ಮಾಡುತ್ತಿದ್ದವು. ಇದು ಗ್ರಾಹಕ ವ್ಯಾಜ್ಯಕ್ಕೆ ಕಾರಣವಾಗುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್, ಏಕರೂಪದ ಮಾರ್ಗಸೂಚಿಯನ್ನು ಹೊರಡಿಸಿದ್ದು ಜೊತೆಗೆ ನೋಂದಣಿಗೆ ಸಂಬಂಧಿಸಿದ ಶುಲ್ಕಗಳನ್ನು ಸಹ ಕೈ ಬಿಡುವಂತೆ ತಿಳಿಸಿದೆ.