ನ್ಯೂಯಾರ್ಕ್: ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿ ಮಾಡಿದ ಬಳಿಕ ನರಾಕಾತ್ಮಕವಾಗಿಯೇ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಅವರು ಇಡುತ್ತಿರುವ ಹೆಜ್ಜೆಗಳು ಶ್ಲಾಘನೆಗಿಂತ ಹೆಚ್ಚು ಟ್ರೋಲ್ ಆಗುತ್ತಿವೆ. ಮಾಡುತ್ತಿರುವ ಯತ್ನಗಳು ಸೋಲುವುದೇ ಹೆಚ್ಚಾಗಿದೆ.
ಇದೀಗ ಹೊಸ ತಲೆನೋವು ಮಸ್ಕ್ ಅವರನ್ನು ಕಾಡತೊಡಗಿದೆ. ಅದೇನೆಂದರೆ ಜಾಹೀರಾತುದಾರರು ಜಾಹೀರಾತುಗಳನ್ನು ನೀಡುತ್ತಿಲ್ಲ ಎನ್ನುವುದು. ಟ್ವಿಟರ್ನಿಂದ ಸಾವಿರಾರು ನೌಕರರನ್ನು ಮಸ್ಕ್ ತೆಗೆದನಂತರ ಟ್ವಿಟರ್ ಕಂಪೆನಿಯು ನಷ್ಟ ಅನುಭವಿಸುತ್ತಿದೆ ಎನ್ನಲಾಗಿದೆ.
ಇದಕ್ಕಾಗಿ ಟ್ವಿಟರ್ನಲ್ಲಿಯೇ ಒಂದು ಪ್ರಶ್ನೆಯನ್ನು ಮಸ್ಕ್ ಮುಂದಿಟ್ಟಿದ್ದರು. ಅದೇನೆಂದರೆ, ನಾನು ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕೆ ಎಂಬುದು. ಸಮೀಕ್ಷೆಯ ಫಲಿತಾಂಶದ ಪ್ರಕಾರ ನಡೆದುಕೊಳ್ಳುವುದಾಗಿಯೂ ಅವರು ಹೇಳಿದ್ದರು.
ಈಗ ಸಮೀಕ್ಷೆ ಫಲಿತಾಂಶ ಹೊರಬಂದಿದೆ. ಮಸ್ಕ್ ಅವರ ಸಮೀಕ್ಷೆಯಲ್ಲಿ ಒಟ್ಟು 17 ಮಿಲಿಯನ್ ಮತಗಳು ಚಲಾವಣೆಯಾಗಿವೆ. ಈ ಪೈಕಿ ಶೇ.57.5ರಷ್ಟು ಮತಗಳು ‘ಹೌದು’ ಎಂಬುದಕ್ಕೆ ಬಿದ್ದಿವೆ. ಶೇ.42.5ರಷ್ಟು ಮತಗಳು ಅವರ ರಾಜೀನಾಮೆಗೆ ವಿರುದ್ಧವಾಗಿವೆ. ಸಮೀಕ್ಷೆಗೆ ಬದ್ಧನಾಗಿದ್ದೇನೆ ಎಂಬ ಹೇಳಿಕೆ ನೀಡಿರುವ ಮಸ್ಕ್ ಅವರ ಮುಂದಿನ ನಿರ್ಧಾರಗಳೇನು ಎಂದು ಕಾಯಬೇಕಿದೆ.