
ಹಾಸನ: ಗಣಪತಿ ವಿಸರ್ಜನೆ ಮಾಡಿ ಬರುವಾಗ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ಸ್ಪರ್ಶವಾಗಿದ್ದರಿಂದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅರಕಲಗೂಡು ಸಮೀಪದ ಕತ್ತಿಮಲ್ಲೇನಹಳ್ಳಿಯಲ್ಲಿ ಸೋಮವಾರ ಘಟನೆ ನಡೆದಿದೆ. 14 ವರ್ಷದ ಯಶವಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಮೋದ್ ಮತ್ತು ಮೋಹನ್ ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಿ ಬರುವಾಗ ಟ್ರ್ಯಾಕ್ಟರ್ ಗೆ ಅಳವಡಿಸಿದ್ದ ಅಲಂಕೃತ ಬೋರ್ಡ್ ಗೆ ವಿದ್ಯುತ್ ತಂತಿ ತಗುಲಿದೆ.
ಟ್ರ್ಯಾಕ್ಟರ್ ನಲ್ಲಿ ಕುಳಿತಿದ್ದ 20ಕ್ಕೂ ಹೆಚ್ಚು ಯುವಕರು ಕೆಳಗೆ ಜಿಗಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.