
ವಯಸ್ಸಾದ ದಂಪತಿ ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ನಡೆದ ಹಾಸ್ಯ ಪ್ರಸಂಗವೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗುವಂತಿದೆ. ರೈಲಿನಲ್ಲಿ ಜೋರಾಗಿ ನಡೆದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋ ಇದಾಗಿದೆ.
ಮಕ್ಕಳೆಲ್ಲಾ ನರ್ತಿಸುತ್ತಿರುವಾಗ ವಯಸ್ಸಾದ ವ್ಯಕ್ತಿಗೂ ಡಾನ್ಸ್ ಮಾಡುವ ಆಸೆಯಾಯಿತು. ಆತ ನರ್ತಿಸುತ್ತಲೇ ತನ್ನ ಜತೆ ಡಾನ್ಸ್ಗೆ ಬಾ ಎಂದು ತನ್ನ ವಯಸ್ಸಾದ ಪತ್ನಿಯನ್ನು ಕರೆಯುತ್ತಾನೆ. ಆದರೆ ನಾಚಿಕೆಯಿಂದ ಆಕೆ ನಿರಾಕರಿಸುತ್ತಾಳೆ. ಪತ್ನಿಯ ಮನಸ್ಸನ್ನು ಅರಿತ ಈ ಪತಿ ಆಕೆಗೆ ಹೊಟ್ಟೆಕಿಚ್ಚು ಆಗಲೆಂದು ಅಲ್ಲಿಯೇ ಇದ್ದ ಬೇರೆಯ ಮಹಿಳೆಯ ಜೊತೆ ನರ್ತಿಸುತ್ತಾನೆ.
ನಿಜಕ್ಕೂ ಇದನ್ನು ನೋಡಿ ಪತ್ನಿಗೆ ಹೊಟ್ಟೆಕಿಚ್ಚು ಆಗುತ್ತದೆ. ಆಕೆ ತಡ ಮಾಡದೇ ಎದ್ದು ನಿಂತು ಅಲ್ಲಿಯೇ ಇದ್ದ ಬೇರೊಬ್ಬ ಪುರುಷನ ಜತೆ ಡಾನ್ಸ್ ಮಾಡಲು ತೊಡಗುತ್ತಾಳೆ. ಅಲ್ಲಿದ್ದವರೆಲ್ಲಾ ಬಿದ್ದೂ ಬಿದ್ದೂ ನಗುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಸನ್ನಿವೇಶಕ್ಕೆ ದಂಪತಿ ಇಬ್ಬರೂ ನಗುವಿನ ಅಲೆಯಲ್ಲಿ ತೇಲಿ ಹೋಗಿದ್ದು, ಇದರ ವಿಡಿಯೋ ನೋಡಿದವರೂ ನಗುವಂತಿದೆ.
ವಯಸ್ಸು ಎಷ್ಟೇ ಆದರೂ ದಂಪತಿ ನಡುವಿನ ಪರಸ್ಪರ ಅಸೂಯೆ ಹೋಗುವುದೇ ಇಲ್ಲ ಎಂದು ನೆಟ್ಟಿಗರು ಕೂಡ ತಮಾಷೆ ಮಾಡುತ್ತಿದ್ದಾರೆ.