ಬಿಸ್ಕೆಟ್ ಸೇವನೆಯಿಂದ ಕ್ಯಾನ್ಸರ್ ಸಂಭವಿಸುತ್ತದೆ ಎಂಬ ಆಘಾತಕಾರಿ ಮಾಹಿತಿ ಅಧ್ಯಯನವೊಂದು ತಿಳಿಸಿದೆ 60 ವಿವಿಧ ಬಿಸ್ಕೆಟ್ ಮಾದರಿಗಳನ್ನು ಅಧ್ಯಯನ ಮಾಡಿದ ಬಳಿಕ ಈ ವಿಚಾರ ತಿಳಿದು ಬಂದಿದೆ ಎನ್ನಲಾಗಿದೆ.
ಮೊದಲೇ ಪ್ಯಾಕ್ ಮಾಡಿ ಇಡಲಾದ ಬಿಸ್ಕೆಟ್ ಗಳಲ್ಲಿ ಗ್ಲೈಸಿಡಾಲ್ ಹಾಗೂ ಅಕ್ರಿಲಾಮೈಡ್ ಎಂಬ ಕ್ಯಾನ್ಸರ್ ಉಂಟು ಮಾಡುವ ಪದಾರ್ಥಗಳು ಇರುವುದು ಪತ್ತೆಯಾಗಿದೆ. ಈ ಎರಡೂ ರಾಸಾಯನಿಕಗಳು ಕ್ಯಾನ್ಸರ್ನ್ನು ತಂದೊಡ್ಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
ಬಿಸ್ಕೆಟ್ ಗಳನ್ನು ತಯಾರು ಮಾಡುವವರಿಗೆ ಗ್ಲೈಸಿಡಾಲ್ ಹಾಗೂ ಅಕ್ರಿಲಾಮೈಡ್ಗಳನ್ನು ಬಳಕೆ ಮಾಡಲು ಅನುಮತಿ ಇದ್ದರೂ ಸಹ ಇಷ್ಟೇ ಪ್ರಮಾಣದಲ್ಲಿ ಬಳಕೆ ಮಾಡಬೇಕೆಂಬ ಮಿತಿಯನ್ನೂ ನಿಗದಿಪಡಿಸಲಾಗಿದೆ. 1 ಕೆಜಿ ಬಿಸ್ಕೆಟ್ ನಲ್ಲಿ 350 ಗ್ರಾಂ ಅಕ್ರಿಲಾಮೈಡ್ ಇದ್ದರೆ ಮಾತ್ರ ಅದನ್ನು ಸುರಕ್ಷಿತ ಎಂದು ಪರಿಗಣಿಸಬಹುದಾಗಿದೆ.
ಆದರೆ ಈ ಅಧ್ಯಯನದಲ್ಲಿ ಕನಿಷ್ಟ 4 ಬಿಸ್ಕೆಟ್ ತಯಾರಕ ಕಂಪನಿಗಳು ಈ ಮಿತಿಯನ್ನು ಮೀರಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮುಜಿಸ್ ಸ್ಯಾಂಡ್ವಿಚ್ ಕ್ರ್ಯಾಕರ್ನಲ್ಲಿ 620 ಗ್ರಾಂ ಅಕ್ರಿಲಾಮೈಡ್ ಬಳಕೆಯಾಗಿದೆ. ಇದರಲ್ಲಿ ಓರಿಯೋ, ಮಾರಿ ಹಾಗೂ ಫ್ರೆಜ್ ವೇಫರ್ಸ್ ಕೂಡ ಸೇರಿದೆ.
ಇದು ಮಾತ್ರವಲ್ಲದೇ ಅಧ್ಯಯನಕ್ಕೆ ಬಳಕೆ ಮಾಡಲಾದ 60 ಬಿಸ್ಕೆಟ್ ಮಾದರಿಗಳಲ್ಲಿ 56ರಲ್ಲಿ 3ಎಂಸಿಪಿಡಿ ಎಂಬ ರಾಸಾಯನಿಕ ಕಾಂಪೌಂಡ್ ಕಂಡುಬಂದಿದೆ. ಇದು ಕಿಡ್ನಿ ಹಾಗೂ ಪುರುಷರ ಸಂತಾನೋತ್ಪತ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
60 ಕೆಜಿಗಿಂತ ಹೆಚ್ಚು ತೂಕವುಳ್ಳ ವ್ಯಕ್ತಿಯು ಒಂದು ದಿನದಲ್ಲಿ ಈ ರಾಸಾಯನಿಕ ಕಾಂಪೌಂಡ್ನ್ನು 120 ಗ್ರಾಂಗಿಂತ ಅಧಿಕ ಸೇವನೆ ಮಾಡುವಂತಿಲ್ಲ. ಆದರೆ ಕೆಲ ಬಿಸ್ಕೆಟ್ ಗಳಲ್ಲಿ ಪ್ರತಿ 1 ಕೆಜಿಯಲ್ಲಿ 2000 ಗ್ರಾಂ 3ಎಂಸಿಪಿಡಿ ಕಂಡು ಬಂದಿದೆ.
33 ಬಿಸ್ಕೆಟ್ ಕಂಪನಿಗಳು ಅತ್ಯಧಿಕ ಕೊಬ್ಬಿನ ಪ್ರಮಾಣವನ್ನು ಹೊಂದಿದೆ. 27 ಬಗೆಯ ಬಿಸ್ಕೆಟ್ ಗಳು ಅತೀ ಹೆಚ್ಚು ಸಕ್ಕರೆ ಅಂಶ ಹಾಗೂ ಸೋಡಿಯಂ ಅಂಶವನ್ನು ಹೊಂದಿದೆ. 40 ಪ್ರತಿಶತ ಬಿಸ್ಕೆಟ್ ಗಳು ಪೋಷಕಾಂಶಗಳ ವಿಚಾರದಲ್ಲಿ ಸುಳ್ಳು ಮಾಹಿತಿಗಳನ್ನು ನಮೂದಿಸಿವೆ.