ಮದ್ಯದ ಅಮಲಿನಲ್ಲಿದ್ದ ಪೊಲೀಸ್ ಪೇದೆಯೊಬ್ಬ ಕಂಟ್ರಿ ಮೇಡ್ ಪಿಸ್ತೂಲ್ನ್ನು ಹಿಡಿದು ಪೊಲೀಸ್ ಠಾಣೆಗೆ ನುಗ್ಗಿದ್ದು ಮಾತ್ರವಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ಘಟನೆಯು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಬರೇಲಿಯ ಸುಭಾಷ್ನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಭವಿಸಿದೆ.
ಆರೋಪಿ ಪೊಲೀಸ್ ಪೇದೆಯನ್ನು ತಾರಾಚಂದ್ ಎಂದು ಗುರುತಿಸಲಾಗಿದೆ. ಈ ಘಟನೆಯ ಬಳಿಕ ಪೊಲೀಸ್ ಪೇದೆಯನ್ನು ಮಾನಸಿಕ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆಯಲ್ಲಿ ವೈದ್ಯರು ಪೊಲೀಸ್ ಪೇದೆಯ ರಕ್ತದಲ್ಲಿ ಅತಿಯಾದ ಮದ್ಯ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಆರೋಪಿ ಪೊಲೀಸ್ ಪೇದೆ ಲೋಡೆಡ್ ಗನ್ ಹಿಡಿದು ಠಾಣೆಗೆ ನುಗ್ಗಿದ್ದರು ಎನ್ನಲಾಗಿದೆ.
ಪೊಲೀಸ್ ಪೇದೆ ತಾರಾಚಂದ್ರನ್ನು ಅಮಾನತು ಮಾಡಲಾಗಿದ್ದು ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ತಾರಾಚಂದ್ ವಿರುದ್ಧ ಐಪಿಸಿ ಸೆಕ್ಷನ್ 3/25 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಈ ಘಟನೆ ನಡೆಯುವ ವೇಳೆ ಮುಖ್ಯ ಪೇದೆ ರಾಜೇಂದ್ರ ಸಿಂಗ್, ಕಂಪ್ಯೂಟರ್ ಆಪರೇಟರ್ ವೀರ್ಪಾಲ್ ಸಿಂಗ್ ಹಾಗೂ ಪೇದೆ ಅನ್ಮೋಲ್ ಸಿಂಗ್ ಠಾಣೆಯಲ್ಲಿದ್ದರು ಎನ್ನಲಾಗಿದೆ. ಸಿಂಗ್ ನೀಡಿರುವ ಮಾಹಿತಿ ಪ್ರಕಾರ ತಾರಾಚಂದ್ ಲೋಡೆಡ್ ಪಿಸ್ತೂಲ್ ಹಿಡಿದು ಠಾಣೆಗೆ ನುಗ್ಗಿದ್ದರು ಎಂದು ತಿಳಿದು ಬಂದಿದೆ.
ಠಾಣೆಗೆ ನುಗ್ಗಿದ ತಾರಾಚಂದ್ ಒಮ್ಮೆಲೆ ಕಿರುಚಲು ಆರಂಭಿಸಿದ್ರು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದರು. ನಾವೆಲ್ಲ ಭಯಗೊಂಡಿದ್ದೆವು ಹಾಗೂ ಅವರಿಗೆ ಶಾಂತರಾಗುವಂತೆ ಮನವಿ ಮಾಡಿದೆವು. ಹೇಗೋ ಅವರ ಗಮನವನ್ನು ಬೇರೆಡೆ ಸೆಳೆಯುವ ಮೂಲಕ ಪಿಸ್ತೂಲ್ ಕಸಿದುಕೊಳ್ಳಲು ಯಶಸ್ವಿಯಾದೆವು. ತಾರಾಚಂದ್ ಅತಿಯಾಗಿ ಮದ್ಯಪಾನ ಮಾಡಿದ್ದರು ಹಾಗೂ ನಮ್ಮೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.