ತಂತ್ರಜ್ಞಾನ ಲೋಕದಲ್ಲಿ ಡ್ರೋನ್ಗಳು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿವೆ. ಸರಳ ಫೋಟೋಗ್ರಫಿಯಿಂದ ಹಿಡಿದು ಗಡಿಯ ಮೇಲೆ ಕಣ್ಣಿಡುವವರೆಗೂ ಡ್ರೋನ್ನ ಸಾಮರ್ಥ್ಯ ಇಡೀ ಜಗತ್ತಿಗೇ ತಿಳಿದಿದೆ. ಈಗಂತೂ ಫುಡ್ ಡೆಲಿವರಿ ಅಪ್ಲಿಕೇಶನ್ಗಳೂ ಸಹ ಡ್ರೋನ್ಗಳನ್ನ ಬಳಸಿಯೇ ಫುಡ್ ಡೆಲಿವರಿ ಮಾಡಲು ಮುಂದಾಗಿವೆ.
ಡ್ರೋನ್ ಒಂದು ಎಲೆಕ್ಟ್ರಿಕ್ ಸಾಧನವಾಗಿದ್ದರೂ ಸಹ ಇದರ ಬಳಕೆ ಬಗ್ಗೆ ಕೆಲವು ನಿರ್ದಿಷ್ಟ ಮಾನದಂಡಗಳು ಇದೆ. ಹೀಗಾಗಿ ಡ್ರೋನ್ ಕ್ಯಾಮರಾಗಳನ್ನ ಕೊಳ್ಳುವ ಮುನ್ನ ಕೆಲವೊಂದಿಷ್ಟು ಅಂಶಗಳನ್ನ ಗಮನದಲ್ಲಿ ಇಡಬೇಕಾಗುತ್ತೆ. ಹಾಗಾದರೆ ಯಾರು ಯಾವ್ಯಾವ ಡ್ರೋನ್ಗಳನ್ನ ಬಳಕೆ ಮಾಡಬಹುದು ಅನ್ನೋದಕ್ಕೆ ಇಲ್ಲಿದೆ ಮಾಹಿತಿ :
ನ್ಯಾನೋ ಡ್ರೋನ್ : ಅತ್ಯಂತ ಲಘುವಾದ ಈ ಡ್ರೋನ್ಗಳು ಅಬ್ಬಬ್ಬಾ ಅಂದರೆ 250 ಗ್ರಾಂ ತೂಕ ಹೊಂದಿರಬಹುದು. ಹೆಸರಿಲ್ಲದ ಏರ್ಕ್ರಾಫ್ಟ್ ಸಿಸ್ಟಮ್ ನಿಯಮ 2021ರ ಪ್ರಕಾರ ಈ ಡ್ರೋನ್ಗಳನ್ನ ಹಾರಿಸಲು ಯಾವುದೇ ಲೈಸೆನ್ಸ್ ಅವಶ್ಯಕತೆ ಇರೋದಿಲ್ಲ.
ಮೈಕ್ರೋ ಹಾಗೂ ಸಣ್ಣ ಡ್ರೋನ್ : ಈ ಡ್ರೋನ್ಗಳು 250 ಗ್ರಾಂಗಿಂತ ಅಧಿಕ ಹಾಗೂ 2 ಕೆಜಿಗಿಂತ ಕಡಿಮೆ ತೂಕವನ್ನ ಹೊಂದಿರುತ್ತವೆ. ಸಣ್ಣ ಡ್ರೋನ್ಗಳು 2 ಕೆಜಿಗಿಂತ ಅಧಿಕ ಹಾಗೂ 25 ಕೆಜಿಗಿಂತ ಕಡಿಮೆ ತೂಕವನ್ನ ಹೊಂದಿದೆ. ಈ ಡ್ರೋನ್ಗಳನ್ನ ಬಳಕೆ ಮಾಡುವವರು ಯುಎಎಸ್ ಆಪರೇಟರ್ ಪರ್ಮಿಟ್ ಹೊಂದಿರೋದು ಅನಿವಾರ್ಯವಾಗಿದೆ.
ಮಧ್ಯಮ ಹಾಗೂ ದೊಡ್ಡ ಡ್ರೋನ್ : ಮಧ್ಯಮ ಗಾತ್ರದ ಡ್ರೋನ್ಗಳು 25 ಕೆಜಿಗಿಂತ ಅಧಿಕ ಹಾಗೂ 150 ಕೆಜಿಗಿಂತ ಕಡಿಮೆ ತೂಕವನ್ನ ಹೊಂದಿರಬೇಕು. ಅದೇ ರೀತಿ ದೊಡ್ಡ ಗಾತ್ರದ ಡ್ರೋನ್ಗಳು 150ಕೆಜಿಗಿಂತ ಅಧಿಕ ತೂಕವನ್ನ ಹೊಂದಿರುತ್ತದೆ. ಇವೆರಡರಲ್ಲಿ ಯಾವುದೇ ಡ್ರೋನ್ಗಳನ್ನ ಬಳಕೆ ಮಾಡೋ ಪೈಲಟ್ಗಳು ಯುಎಎಸ್ ಆಪರೇಟರ್ ಪರ್ಮಿಟ್ – || ಹೊಂದಿರಬೇಕು.
ಇನ್ನು ಡ್ರೋನ್ ನಿರ್ವಹಿಸಲು ಅನುಮತಿ ನೀಡಲಾಗುವ ಪರವಾನಗಿಯಲ್ಲಿ ಎರಡು ವಿಧಗಳಿವೆ. ಇದರಲ್ಲಿ ಒಂದು ವಿದ್ಯಾರ್ಥಿ ರಿಮೋಟ್ ಪೈಲಟ್ ಪರವಾನಗಿ ಹಾಗೂ ಇನ್ನೊಂದು ರಿಮೋಟ್ ಪೈಲಟ್ ಪರವಾನಗಿ. ಈ ಯಾವುದೇ ಪರವಾನಗಿ ಹೊಂದಿರುವವರು ವಾಣಿಜ್ಯ ಉದ್ದೇಶಕ್ಕೆ ಡ್ರೋನ್ ಬಳಕೆ ಮಾಡುವವರಾಗಿದ್ದರೆ ಕನಿಷ್ಟ 18 ವರ್ಷ ಹಾಗೂ ಗರಿಷ್ಟ 65 ವರ್ಷದೊಳಗಿನವರಾಗಿರಬೇಕು.
ಇದು ಮಾತ್ರವಲ್ಲದೇ ಡ್ರೋನ್ ಲೈಸೆನ್ಸ್ ಪಡೆಯುವವರು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೇ ಡಿಜಿಸಿಎ ಒದಗಿಸುವ ವೈದ್ಯಕೀಯ ಪರೀಕ್ಷೆ ಹಾಗೂ ಹಿನ್ನಲೆ ಪರಿಶೀಲನೆಗಳಲ್ಲಿ ಪಾಸ್ ಆಗಬೇಕು.
ವಿದ್ಯಾರ್ಥಿ ರಿಮೋಟ್ ಪೈಲಟ್ ಲೈಸೆನ್ಸ್ : ಈ ಪರವಾನಿಗೆಯು 5 ವರ್ಷಗಳ ಮಾನ್ಯತೆಯನ್ನ ಹೊಂದಿರುತ್ತದೆ. ಮುಂದಿನ 2 ವರ್ಷಗಳಿಗೆ ಈ ಲೈಸೆನ್ಸ್ನ್ನು ನವೀಕರಣ ಮಾಡಿಕೊಳ್ಳಬಹುದು.
ರಿಮೋಟ್ ಪೈಲಟ್ ಲೈಸೆನ್ಸ್ : ಈ ಲೈಸೆನ್ಸ್ಗಳಿಗೆ 10 ವರ್ಷಗಳ ಮಾನ್ಯತೆ ಇರಲಿದೆ. ಅವಧಿ ಮೀರಿದ ಲೈಸೆನ್ಸ್ಗಳನ್ನ ಮುಂದಿನ 10 ವರ್ಷಗಳಿಗೆ ನವೀಕರಿಸಿಕೊಳ್ಳಬಹುದಾಗಿದೆ.