alex Certify ಇನ್ನು ಕೇವಲ 20 ದಿನಗಳಿಗಷ್ಟೇ ಶಾಂತಿಸಾಗರದಲ್ಲಿ ನೀರು ಲಭ್ಯ: ಅನಧಿಕೃತ ಪಂಪ್ ಸೆಟ್ ತೆರವಿಗೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನು ಕೇವಲ 20 ದಿನಗಳಿಗಷ್ಟೇ ಶಾಂತಿಸಾಗರದಲ್ಲಿ ನೀರು ಲಭ್ಯ: ಅನಧಿಕೃತ ಪಂಪ್ ಸೆಟ್ ತೆರವಿಗೆ ಸೂಚನೆ

ದಾವಣಗೆರೆ: ಶಾಂತಿಸಾಗರದಿಂದ ಚನ್ನಗಿರಿ, ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಬಳಕೆಯಾಗುತ್ತಿದ್ದು, ಮುಂದಿನ 20 ದಿನಗಳಿಗೆ ಮಾತ್ರ ನೀರಿನ ಸಂಗ್ರಹವಿದೆ. ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಅನಧಿಕೃತವಾಗಿ ಅಳವಡಿಸಿರುವ ಪಂಪ್ ಸೆಟ್ ಗಗಳನ್ನು ತೆರವು ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬೆಸ್ಕಾಂ, ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಗಳಿಗೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಸೂಚನೆ ನೀಡಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಕುರಿತಂತೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಂಜಿನಿಯರ್, ಪಶುಸಂಗೋಪನಾ ಇಲಾಖೆ, ಬೆಸ್ಕಾಂ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದರು.

ಶಾಂತಿಸಾಗರದಿಂದ ಎರಡು ಜಿಲ್ಲೆಗಳ ಪ್ರಮುಖ ಪಟ್ಟಣ, ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಕೆರೆಗೆ ಅನಧಿಕೃತವಾಗಿ ಪಂಪ್ ಸೆಟ್ ಅಳವಡಿಸಿಕೊಂಡು ಅಕ್ರಮವಾಗಿ ನೀರೆತ್ತಲಾಗುತ್ತಿದೆ. ಇದರಿಂದ ನೀರಿನ ಸಂಗ್ರಹ ತುಂಬಾ ಇಳಿಕೆಯಾಗಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆಯಾಗಲಿದೆ ಎಂದರು.

ಬೆಸ್ಕಾಂನಿಂದ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿಕೊಟ್ಟಿದ್ದರಿಂದ ರೈತರು ಅನಧಿಕೃತವಾಗಿ ಕೆರೆಯಲ್ಲಿನ ನೀರನ್ನು ಬಳಕೆ ಮಾಡುತ್ತಿದ್ದಾರೆ. ಅನಧಿಕೃತವಾಗಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳನ್ನು ತೆರವು ಮಾಡಲು ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲು ಬೆಸ್ಕಾಂ ಇಂಜಿನಿಯರ್‍ಗೆ ಸೂಚನೆ ನೀಡಿದರು. ಶಾಂತಿಸಾಗರದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಕಾಲುವೆ ಮೂಲಕ ನೀರು ಶೇಖರಣೆಗೆ ಕ್ರಮವಹಿಸಲಾಗುತ್ತದೆ ಎಂದರು.

ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ;

ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾದಲ್ಲಿ ಖಾಸಗಿ ಕೊಳವೆಬಾವಿ ಸಿಗದಿದ್ದಲ್ಲಿ ತಕ್ಷಣವೇ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಬೇಕು. ದೂರದ ಆಧಾರದ ಮೇಲೆ ಈಗಾಗಲೇ ಪ್ರತಿ ಟ್ಯಾಂಕರ್ ಗೆ 500 ರೂ., 600 ರೂ., ಹಾಗೂ 900 ರೂ.ರವರೆಗೆ ದರ ನಿಗದಿ ಮಾಡಲಾಗಿದೆ. ಟೆಂಡರ್ ಕರೆಯಲಾಗಿಲ್ಲ ಎಂದು ತಾಂತ್ರಿಕ ನೆಪವೊಡ್ಡಿ ಜನರಿಗೆ ನೀರು ಕೊಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರಸ್ಥಾನ ಬಿಡುವಂತಿಲ್ಲ;

ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ಸಾಂಕ್ರಾಮಿಕ ಕಾಯಿಲೆಗಳು ಸೇರಿದಂತೆ ವಿಕೋಪದಿಂದಾಗುವ ಸಮಸ್ಯೆಗಳನ್ನು ಎದುರಿಸಲು ಅಧಿಕಾರಿಗಳು ಸದಾ ಸನ್ನದ್ದರಾಗಿರಬೇಕು. ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿವೆ ಎಂದು ಪರಿಶೀಲನೆ ನಡೆಸಿ ಆಳಕ್ಕೆ ಕೊರೆಯಬೇಕಾಗಿದ್ದಲ್ಲಿ ಅಂತಹ ಕೊಳವೆಬಾವಿಗಳ ವಿವರದೊಂದಿಗೆ ಪ್ರಸ್ತಾವನೆಯನ್ನು ಆಯಾ ತಾಲ್ಲೂಕು ತಹಶೀಲ್ದಾರರಿಗೆ ಸಲ್ಲಿಸಬೇಕು ಎಂದರು.

ಸಹಾಯವಾಣಿ ಸ್ಥಾಪನೆ;

ಬರಗಾಲ ಇರುವುದರಿಂದ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ತಕ್ಷಣವೇ ಸಹಾಯವಾಣಿ ಆರಂಭಿಸಬೇಕು. ಜನರು ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆಯಾದಲ್ಲಿ ಮತ್ತು ಇತರೆ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳುವರು.

18.77 ಕೋಟಿ ರೂ. ಲಭ್ಯ;

ಬರಗಾಲ ಎದುರಿಸಲು ತುರ್ತು ಕೆಲಸಗಳಿಗಾಗಿ ಅಂದರೆ ಕುಡಿಯುವ ನೀರು, ಮೇವು ಪೂರೈಕೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 16.10 ಕೋಟಿ ರೂ., ಮತ್ತು ಎಲ್ಲಾ ತಹಶೀಲ್ದಾರರ ಖಾತೆಯಲ್ಲಿ 2.67 ಕೋಟಿ ರೂ. ಹಣವಿದ್ದು ಯಾವುದೇ ಅನುದಾನದ ಕೊರತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವೀಡಿಯೋ ಕಾನ್ಫರೆನ್ಸ್‍ನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಉಪವಿಭಾಗಾಧಿಕಾರಿ ಅಭಿಷೇಕ್, ದುರ್ಗಶ್ರೀ, ಡಿಡಿಎಲ್‍ಆರ್ ಭಾವನಾ ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...